ಮೊಳಕಾಲ್ಮುರು:
ಮೊಳಕಾಲ್ಮುರು ತಾಲೂಕಿನ ತಮ್ಮೇನಹಳ್ಳಿಯ ವೆಂಕಟೇಶ ತಾತ ಸ್ವಾಮೀಜಿ ಅವರಿಗೆ ಸಂಬಂಧಿಸಿದಂತೆ ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅನೈತಿಕ ಸಂಬಂಧದ ವಿಡಿಯೋಗಳು ಸತ್ಯಕ್ಕೆ ದೂರವಾದವು ಎಂದು ಸ್ವಾಮೀಜಿ ಹಾಗೂ ಶ್ರೀಮಠದ ಭಕ್ತಾದಿಗಳು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೆಂಕಟೇಶ ತಾತ ಸ್ವಾಮೀಜಿ ಮಾತನಾಡಿ, “ಇದು ಸಂಬಂಧಿಕರ ನಡುವಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಗಲಾಟೆ. ಉದ್ದೇಶಪೂರ್ವಕವಾಗಿ ಇದಕ್ಕೆ ಅನೈತಿಕ ಸಂಬಂಧದ ಬಣ್ಣ ಬಳಿದು ಅಪಪ್ರಚಾರ ಮಾಡಲಾಗಿದೆ” ಎಂದು ಆರೋಪಿಸಿದರು.
“ನಾನು ಈ ಮಠದ ಅಧಿಕಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೆ ಸಾವಿರಾರು ಸಹೋದರಿಯರಿಗೆ ಹುಡಿಹಕ್ಕಿ, ಬಾಗಿನ ಹಾಗೂ ಇತರೆ ಮುತ್ತೈದೆ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ನೂರಾರು ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕ ವಿತರಿಸಿದ್ದೇನೆ. ನೂರಾರು ಬಡ ಮಕ್ಕಳಿಗೆ ಸಹಾಯ ಮಾಡಿದ್ದೇನೆ. ಶ್ರೀಮಠಕ್ಕೆ ಬರುವ ಪ್ರತಿಯೊಬ್ಬ ಭಕ್ತಾದಿಯನ್ನೂ ನನ್ನ ಸಹೋದರಿ, ಮಕ್ಕಳೆಂದು ಭಾವಿಸಿದ್ದೇನೆ. ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದಿದ್ದೇನೆ” ಎಂದು ಅವರು ಹೇಳಿದರು.
“ನನ್ನ ಬೆಳವಣಿಗೆಯನ್ನು ಸಹಿಸದ ಕೆಲ ವಿರೋಧಿಗಳು ಇಲ್ಲಸಲ್ಲದ ಕಥೆಗಳನ್ನು ಸೃಷ್ಟಿಸಿ ನನ್ನ ಮೇಲೆ ಹಲ್ಲೆ ನಡೆಸಿ, ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ನಾನು ಮತ್ತು ಶ್ರೀಮಠದ ಭಕ್ತಾದಿಗಳು ಸಹಿಸುವುದಿಲ್ಲ” ಎಂದು ಅವರು ಕಿಡಿಕಾರಿದರು.
ಸದ್ಯದಲ್ಲೇ ಭಕ್ತಾದಿಗಳ ಸಮ್ಮುಖದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ತಮ್ಮ ಬಗ್ಗೆ ಅಪಪ್ರಚಾರ ಮಾಡಿದವರ ವಿರುದ್ಧ ಕಾನೂನಾತ್ಮಕವಾಗಿ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು. ಮುಂದಿನ ನಡೆಯ ಕುರಿತು ಆದಷ್ಟು ಶೀಘ್ರದಲ್ಲಿ ಮತ್ತೊಂದು ಪತ್ರಿಕಾಗೋಷ್ಠಿ ನಡೆಸಿ ಪ್ರಕಟಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶ್ರೀಮಠದ ಭಕ್ತಾದಿಗಳು, ಸಾರ್ವಜನಿಕರು ಹಾಗೂ ವೆಂಕಟೇಶ ತಾತ ಸ್ವಾಮೀಜಿಯವರ ಅಭಿಮಾನಿಗಳು ಉಪಸ್ಥಿತರಿದ್ದರು.

