ಶ್ರೀನಿವಾಸಪುರ ತಾಲೂಕಿನ ಮೀಸಗಾನಹಳ್ಳಿಗ್ರಾಮದಲ್ಲಿಘಟನೆ; ಜುಲೈ3 ರಂದು ಮನೆ ಪಾಯ ಹಾಕಲು ರಕ್ಷಣೆ ನೀಡುವಂತೆ ಅಳಲು
ಕೋಲಾರ: ತಾಲೂಕಿನ ಶ್ರೀನಿವಾಸಪುರ ವ್ಯಾಪ್ತಿಯ ಮೀಸಗಾನಹಳ್ಳಿ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ವಾಸವಾಗಿರುವ ವೃದ್ಧೆಯೊಬ್ಬರ ಸ್ವಂತ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ನೆರೆಮನೆಯವರು ಅಡ್ಡಿಪಡಿಸುತ್ತಿದ್ದು, ಕೊಲೆ ಬೆದರಿಕೆ ಹಾಕುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ನೊಂದ ಮಹಿಳೆ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆ ಕೋರಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಮೀಸಗಾನಹಳ್ಳಿ ಗ್ರಾಮದ ಖಾತೆ ಸಂಖ್ಯೆ 181 ರ ನಿವಾಸಿಯಾದ ನರಸಮ್ಮ (ಗಂಡ ಶ್ರೀನಿವಾಸಪ್ಪ) ದೂರು ನೀಡಿದ ಮಹಿಳೆಯಾಗಿದ್ದಾರೆ. ಅವರು ತಮ್ಮ ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ವಾಸದ ಮನೆ ಸುಧಾರಣೆಗಾಗಿ ಹಳೆಯ ಮನೆಯನ್ನು ಕೆಡವಿ ಮರುನಿರ್ಮಾಣ ಮಾಡಲು ಮುಂದಾದಾಗ ಈ ವಿವಾದ ಉಂಟಾಗಿದೆ. ಸುಮಾರು ಪೂರ್ವ-ಪಶ್ಚಿಮ 17 ಅಡಿ ಮತ್ತು ಉತ್ತರ-ದಕ್ಷಿಣ 28 ಅಡಿ ವಿಸ್ತೀರ್ಣದ ಈ ನಿವೇಶನದಲ್ಲಿ ಕಳೆದ ಹಲವು ದಶಕಗಳಿಂದ ಯಾವುದೇ ವಿವಾದ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
10 ಅಡಿ ಜಾಗ ಬಿಡುವಂತೆ ದೌರ್ಜನ್ಯ ಬೆದರಿಕೆ
ನರಸಮ್ಮ ಅವರು ಹೊಸ ಮನೆ ನಿರ್ಮಾಣದ ಕಾಮಗಾರಿ ಆರಂಭಿಸಲು ಮುಂದಾದಾಗ, ಅವರ ನೆರೆಮನೆಯ ನಿವಾಸಿಯಾದ ಎಂ. ವಿ. ಕೃಷ್ಣಪ್ಪ ಮತ್ತು ಅವರ ಸಹೋದರರು ದುರುದ್ದೇಶದಿಂದ ಅಡ್ಡಿಪಡಿಸಲು ಆರಂಭಿಸಿದ್ದಾರೆ. ಯಾವುದೇ ಪೂರ್ವ ವಿವಾದವಿಲ್ಲದ ಜಾಗದಲ್ಲಿ ಅಕ್ರಮವಾಗಿ ನುಗ್ಗಿ, “ಮನೆ ಕಟ್ಟಬೇಕಾದರೆ 10 ಅಡಿ ಜಾಗ ಬಿಟ್ಟು ಕಟ್ಟಬೇಕು, ಇಲ್ಲದಿದ್ದರೆ ಮನೆ ಕಟ್ಟಲು ಬಿಡುವುದಿಲ್ಲ” ಎಂದು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ನರಸಮ್ಮ ಆರೋಪಿಸಿದ್ದಾರೆ.
“೧೦ ಅಡಿ ಜಾಗ ಬಿಟ್ಟಿಲ್ಲ ಅಂದ್ರೇ ಮನೆ ಕಟ್ ಬೇಡಿ, ಒಂದು ವೇಳೆ ಜಾಗಬಿಡದೆ ಕಟ್ತಿರಾ ಅಂದ್ರೆ ಅದು ಕಟ್ತಿರಾ ಕಟ್ಟಿ ನಾವು ನೋಡ್ತಿವಿ“ ಎಂದು ದಬ್ಬಾಳಿಕೆಯುತವಾಗಿ ಹೇಳಿ, ನಮ್ಮ ಮೇಲೆ ಹಲ್ಲೆ ನಡೆಸುವ ಸಂಚು ರೂಪಿಸಿ ದೈಹಿಕ ಹಲ್ಲೆ, ಕೊಲೆ ಬೇದರಿಕೆಯಂತಹ ಎಚ್ಚರಿಕೆಯನ್ನು ನೀಡಿದ್ದು, “ಅಪರಾಧ ಹಿನ್ನೆಲೆ ಹೊಂದಿರುವ ಇವರ ವರ್ತನೆಯಿಂದಾಗಿ ನನ್ನ ಬದುಕುವ ಹಕ್ಕನ್ನೇ ಕಸಿದುಕೊಳ್ಳುವಂತಾಗಿದೆ” ಎಂದು ಸಂತ್ರಸ್ತೆ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಕಾನೂನು ಸುವ್ಯವಸ್ಥೆಗೆ ಮನವಿ
ಸಂತ್ರಸ್ತೆ ನರಸಮ್ಮ ಅವರು ಕಾನೂನಾತ್ಮಕವಾಗಿ ಹಕ್ಕು ಮತ್ತು ವಾರಸತ್ವ ಹೊಂದಿರುವ ತಮ್ಮದೇ ನಿವೇಶನದಲ್ಲಿ ದಿನಾಂಕ 03.07.2026 ರಂದು ಮನೆಯ ಅಡಿಪಾಯ (ಪಾಯ) ಹಾಕುವ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಎದುರಾಳಿಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ತಮಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಅವರು ಅರ್ಜಿಯ ಮೂಲಕ ಎಸ್‌ಪಿ, ಪಿ.ಎಸ್.ಐ ಹಾಗೂ ಡಿಸಿ ಸೇರಿದಂತೆ ತಹಶೀಲ್ದಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಜುಲೈ ೩ ರಂದು ಈ ದೂರಿನ ಅನ್ವಯ ಪೊಲೀಸ್ ಇಲಾಖೆ ಮತ್ತು ಆಡಳಿತ ಅಧಿಕಾರಿಗಳು ಮುಂದಿನ ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೆಕಿದೆ..

