Breaking
Sun. Nov 1st, 2026

ಪಾವಗಡದಲ್ಲಿ ರಾಷ್ಟ್ರೀಯ ಏಕತಾ ನಡಿಗೆ: ಬೃಹತ್ ಮಾನವ ಸರಪಳಿ ನಿರ್ಮಿಸಿ ಒಗ್ಗಟ್ಟಿನ ಸಂದೇಶ

ಪಾವಗಡ: ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯ ಮಹತ್ವ ಸಾರುವ ಉದ್ದೇಶದಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 151ನೇ ಜನ್ಮದಿನದ ಅಂಗವಾಗಿ ಪಾವಗಡದಲ್ಲಿ ರಾಷ್ಟ್ರೀಯ ಏಕತಾ ನಡಿಗೆ ಹಾಗೂ ಬೃಹತ್ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ತುಮಕೂರು ಜಿಲ್ಲಾ ಪೊಲೀಸ್ ಮತ್ತು ಪಾವಗಡ ಪೊಲೀಸ್ ಠಾಣೆಯ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡು ರಾಷ್ಟ್ರೀಯ ಏಕತೆಯ ಸಂದೇಶ ಸಾರಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನಿಂದ ಆರಂಭವಾದ ಏಕತಾ ನಡಿಗೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸ್ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿದರು. ದೇಶದ ಏಕತೆ ಮತ್ತು ಸಾಮರಸ್ಯವನ್ನು ಪ್ರತಿಬಿಂಬಿಸುವ ಘೋಷಣೆಗಳನ್ನು ಕೂಗುತ್ತಾ ಸಾಗಿದ ಮೆರವಣಿಗೆ ಇಂದಿರಾಗಾಂಧಿ ವೃತ್ತವನ್ನು ತಲುಪಿತು. ಅಲ್ಲಿ ಭಾಗವಹಿಸಿದ್ದವರು ಬೃಹತ್ ಮಾನವ ಸರಪಳಿ ನಿರ್ಮಿಸಿ, ಜಾತಿ, ಧರ್ಮ, ಭಾಷೆ ಹಾಗೂ ಸಂಸ್ಕೃತಿಯ ಭಿನ್ನತೆಗಳನ್ನು ಮೀರಿ ದೇಶದ ಏಕತೆಯನ್ನು ಕಾಪಾಡುವ ಸಂಕಲ್ಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾವಗಡ ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ್, ಸ್ವಾತಂತ್ರ್ಯಾನಂತರ ಭಾರತದ ವಿವಿಧ ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತದ ನಿರ್ಮಾಣದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಮಹತ್ವದ ಪಾತ್ರ ವಹಿಸಿದ್ದರು. ಅವರ ಸ್ಮರಣಾರ್ಥ ಪ್ರತಿವರ್ಷ ಅಕ್ಟೋಬರ್ 31ರಂದು ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಭಾಷೆ, ಧರ್ಮ ಹಾಗೂ ಜಾತಿಯ ಭೇದಭಾವಗಳನ್ನು ಮೀರಿ ಸಹೋದರತ್ವ ಮತ್ತು ಸಾಮರಸ್ಯ ಬೆಳೆಸಿಕೊಳ್ಳಬೇಕು. ಯುವಜನತೆ ದೇಶಪ್ರೇಮದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಾಮಕೃಷ್ಣಪ್ಪ, ಶ್ರೀನಿವಾಸ್, ಚೆನ್ನಮ್ಮ, ಪ್ರವೀಣ್, ಗೋಪಾಲಕೃಷ್ಣ, ನಾಗಭೂಷಣ ರೆಡ್ಡಿ, ದೀಪಕ್ ಕುಮಾರ್, ಗೀತಾ ಮತ್ತು ಬಿನ್ಸಿಲ್ಲಾ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಮಾನವ ಸರಪಳಿ ಮತ್ತು ಏಕತಾ ನಡಿಗೆಯ ಮೂಲಕ ಪಾವಗಡದಲ್ಲಿ ರಾಷ್ಟ್ರೀಯ ಏಕತೆ ಹಾಗೂ ಸಾಮರಸ್ಯದ ಸಂದೇಶ ಸಾರಲಾಯಿತು.

Related Post

Leave a Reply

Your email address will not be published. Required fields are marked *