Breaking
Sun. Nov 1st, 2026

ಹರಿಹರಪುರದಲ್ಲಿ ಒಳಚರಂಡಿ ವ್ಯವಸ್ಥೆಗೆ ಬಿಪಿಎಸ್ ಆಗ್ರಹ

ನಿರ್ಲಕ್ಷ್ಯ ಮುಂದುವರಿದರೆ ಪಾದಯಾತ್ರೆ ಎಚ್ಚರಿಕೆ

ಪಾವಗಡ: ಹಿಂದುಳಿದ ವರ್ಗಗಳ ಜನರು ವಾಸಿಸುವ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸದಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಭಾರತೀಯ ಪರಿವರ್ತನ ಸಂಘದ (ಬಿಪಿಎಸ್) ವತಿಯಿಂದ ಒತ್ತಾಯಿಸಲಾಗಿದೆ.

ಪಾವಗಡ ತಾಲ್ಲೂಕಿನ ನಿಡಗಲ್ಲು ಹೋಬಳಿಯ ಸಿ.ಕೆ. ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಹರಪುರ ಗ್ರಾಮದಲ್ಲಿ ಹಿಂದುಳಿದ ವರ್ಗದವರು ವಾಸಿಸುವ ಪ್ರದೇಶದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಗಳಿಂದ ಹೊರಬರುವ ಬಳಕೆ ನೀರು ರಸ್ತೆಯಲ್ಲೇ ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದೇ ರಸ್ತೆಯ ಮೂಲಕ ಶನೇಶ್ವರ ಹಾಗೂ ದುರ್ಗಾದೇವಿ ದೇವಸ್ಥಾನಗಳಿಗೆ ತೆರಳುವ ಭಕ್ತರು ಮತ್ತು ಶಾಲೆಗೆ ಹೋಗುವ ವಿದ್ಯಾರ್ಥಿಗಳು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.ಈ ಕುರಿತು ಬಿಪಿಎಸ್ ವತಿಯಿಂದ ಹಲವು ಬಾರಿ ಸಿ.ಕೆ. ಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂಬುದು ಸಂಘಟನೆಯ ಆರೋಪವಾಗಿದೆ.

ಈ ಹಿನ್ನೆಲೆಯಲ್ಲಿ ಭಾರತೀಯ ಪರಿವರ್ತನ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎಚ್. ಕೆಂಚರಾಯ ಅವರು ಹರಿಹರಪುರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಎನ್. ನರಸಿಂಹಪ್ಪ, ಶಿಕ್ಷಕರಾದ ಸುಭಾಷ್ ಚಂದ್ರ ಬೋಸ್, ರಾಧಮ್ಮ, ಈಡಿಗ ಸಮುದಾಯದ ತಿಪ್ಪೇಸ್ವಾಮಿ, ಬಿಪಿಎಸ್‌ನ ಸಿ.ಕೆ. ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ಈ. ನಾಗರಾಜು, ಮುಖಂಡರಾದ ಹನುಮಂತರಾಯಪ್ಪ, ಈರಣ್ಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.ಈ ವೇಳೆ ಮಾತನಾಡಿದ ಎಚ್. ಕೆಂಚರಾಯ ಅವರು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ, ಬಿಪಿಎಸ್ ರಾಜ್ಯಾಧ್ಯಕ್ಷ ಹಾಗೂ ವಕೀಲ ಹರಿರಾಮ್ ಅವರ ಮಾರ್ಗದರ್ಶನದಲ್ಲಿ ಹರಿಹರಪುರ ಗ್ರಾಮದಿಂದ ಪಾವಗಡ ತಾಲ್ಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಗ್ರಾಮದ ಸಾರ್ವಜನಿಕರ ಆರೋಗ್ಯ ಮತ್ತು ಸಂಚಾರಕ್ಕೆ ಸಂಬಂಧಿಸಿದ ಈ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

Related Post

Leave a Reply

Your email address will not be published. Required fields are marked *