Breaking
Sun. Nov 1st, 2026

ಜೀತ ವಿಮುಕ್ತರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಲು ಆಗ್ರಹ: ಪಾವಗಡದಲ್ಲಿ ಬೃಹತ್ ಪ್ರತಿಭಟನೆ

ಪಾವಗಡ: ಜೀತ ಪದ್ಧತಿಯಿಂದ ಬಿಡುಗಡೆಯಾದವರಿಗೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜೀವಿಕ ಸಂಘಟನೆಯ ನೇತೃತ್ವದಲ್ಲಿ ಜೀತ ವಿಮುಕ್ತರು ಪಾವಗಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ನಿರೀಕ್ಷಣಾ ಮಂದಿರದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, “ಜೀತ ವಿಮುಕ್ತಿ, ದೇಶದ ಶಕ್ತಿ” ಎಂಬ ಘೋಷಣೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಉಪತಹಶೀಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.

ಪಾವಗಡ ತಾಲೂಕಿನಲ್ಲಿ 670 ಮಂದಿ ಜೀತ ಪದ್ಧತಿಯಿಂದ ಬಿಡುಗಡೆಯಾಗಿದ್ದರೂ, ಅವರಿಗೆ ದೊರೆಯಬೇಕಾದ ಸರ್ಕಾರಿ ಸೌಲಭ್ಯಗಳು ಸಮರ್ಪಕವಾಗಿ ಲಭಿಸುತ್ತಿಲ್ಲ ಎಂದು ತಾಲೂಕು ಸಂಚಾಲಕ ನರಸಿಂಹಮೂರ್ತಿ ಆರೋಪಿಸಿದರು. ಹಲವು ಬಾರಿ ಹೋರಾಟ ನಡೆಸಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ಸಂಜೀವಮೂರ್ತಿ ಮಾತನಾಡಿ, ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ ಜಾರಿಯಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಕಳೆದಿದ್ದರೂ ಜೀತ ವಿಮುಕ್ತರಿಗೆ ನಿರೀಕ್ಷಿತ ನ್ಯಾಯ ಮತ್ತು ಪುನರ್ವಸತಿ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ರದ್ದುಪಡಿಸಿ, ಹಳೆಯ ಕಾಯ್ದೆಯ ಆಶಯಗಳನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖ ಬೇಡಿಕೆಗಳು:

ಜೀತ ವಿಮುಕ್ತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ತಲಾ ₹2 ಲಕ್ಷ ಪರಿಹಾರ, ಸರ್ಕಾರಿ ಸೌಲಭ್ಯಗಳಲ್ಲಿ ಮೊದಲ ಆದ್ಯತೆ, ವಿಶೇಷ ಪ್ಯಾಕೇಜ್ ಮೂಲಕ ಸಾಲ ಸೌಲಭ್ಯ, ನಿವೇಶನ ಮತ್ತು ವಸತಿ, ಎರಡು ಎಕರೆ ಭೂಮಿ ಹಾಗೂ ಕೊಳವೆಬಾವಿ ಸೌಲಭ್ಯ ಕಲ್ಪಿಸಬೇಕು. ಮಕ್ಕಳ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಜಾಗ ಮತ್ತು ಜೀವಿಕ ಸಂಘಟನೆ ಹಾಗೂ ಕಾರ್ಯಕರ್ತರಿಗೆ ನಿವೇಶನ ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ದಲಿತ ಮುಖಂಡರು ಹಾಗೂ 200ಕ್ಕೂ ಹೆಚ್ಚು ಜೀತ ವಿಮುಕ್ತರು ಪಾಲ್ಗೊಂಡಿದ್ದರು.

Related Post

Leave a Reply

Your email address will not be published. Required fields are marked *