Breaking
Sun. Nov 1st, 2026

ಪಾವಗಡದಲ್ಲಿ ಕುಡಿಯುವ ನೀರು, ಮೇವು ಕೊರತೆ ನಿವಾರಣೆಗೆ ಜಿಲ್ಲಾಧಿಕಾರಿ ಸೂಚನೆ

ಕೊಳವೆಬಾವಿ, ಮೇವು ಬೆಳೆ ಪರಿಶೀಲಿಸಿದ ಶುಭಾ ಕಲ್ಯಾಣ್‌; 34 ಗ್ರಾಮ ಪಂಚಾಯಿತಿಗಳ ಸಮಸ್ಯೆಗಳಿಗೆ ತ್ವರಿತ ಪರಿಹಾರದ ಭರವಸೆ

ಪಾವಗಡ: ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಪಾವಗಡ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಕ್ಷೇತ್ರ ಭೇಟಿ ನಡೆಸಿ, ಕೊಳವೆಬಾವಿಗಳ ಸ್ಥಿತಿಗತಿ, ಮೇವಿನ ಬೀಜ ವಿತರಣೆ ಹಾಗೂ ಮೇವು ಬೆಳೆಗಳ ಪ್ರಗತಿಯನ್ನು ಪರಿಶೀಲಿಸಿದರು. ಬಳಿಕ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಗ್ರಾಮೀಣ ಭಾಗದ ಸಮಸ್ಯೆಗಳನ್ನು ಆಲಿಸಿ ತ್ವರಿತ ಪರಿಹಾರಕ್ಕೆ ಸೂಚನೆ ನೀಡಿದರು.

ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ರಾಜವಂತಿ ಕಾಲೋನಿಯಲ್ಲಿನ ಯಶಸ್ವಿ ಕೊಳವೆಬಾವಿ ಹಾಗೂ ದೊಡ್ಡಹಟ್ಟಿಯಲ್ಲಿನ ವಿಫಲ ಕೊಳವೆಬಾವಿಯನ್ನು ಪರಿಶೀಲಿಸಿದರು. ಚಿಕ್ಕನಾಯಕನಹಳ್ಳಿ ಮತ್ತು ಬಾಡನೂರು ಗ್ರಾಮಗಳಲ್ಲಿ ರೈತರಿಗೆ ವಿತರಿಸಲಾದ ಮೇವಿನ ಬೀಜಗಳ ಬಳಕೆ ಹಾಗೂ ಬೆಳೆದಿರುವ ಮೇವು ಬೆಳೆಗಳನ್ನು ವೀಕ್ಷಿಸಿ, ಜಾನುವಾರುಗಳಿಗೆ ಮೇವು ಒದಗಿಸುವ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿದರು.

ನಂತರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಾಲೂಕಿನ 34 ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ (ಪಿಡಿಒ) ಗ್ರಾಮವಾರು ಸಮಸ್ಯೆಗಳ ಕುರಿತು ನೇರವಾಗಿ ಮಾಹಿತಿ ಪಡೆದರು. ಕುಡಿಯುವ ನೀರಿನ ಅಭಾವ, ಜಾನುವಾರುಗಳಿಗೆ ಮೇವಿನ ಕೊರತೆ, ತುಂಗಭದ್ರಾ ನೀರು ಪೂರೈಕೆಯಲ್ಲಿ ವ್ಯತ್ಯಯ ಹಾಗೂ ನೀರು ಪೂರೈಕೆ ಮಾಡುವ ವಾಟರ್‌ಮ್ಯಾನ್‌ಗಳ ಕಡಿಮೆ ವೇತನದ ಸಮಸ್ಯೆಗಳು ಸಭೆಯಲ್ಲಿ ಪ್ರಸ್ತಾಪವಾದವು.

ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ತುಂಗಭದ್ರಾ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಪ್ರದೇಶಗಳಲ್ಲಿ ತಕ್ಷಣ ಸಮಸ್ಯೆ ಸರಿಪಡಿಸಬೇಕು. ಬರಗಾಲದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ತುರ್ತು ಕಾಮಗಾರಿಗಳನ್ನು ಚುರುಕುಗೊಳಿಸಿ, ಗ್ರಾಮಗಳ ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಪರಿಹಾರ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು. ವಾಟರ್‌ಮ್ಯಾನ್‌ಗಳ ವೇತನ ಹೆಚ್ಚಳದ ಮನವಿಗೆ ಸ್ಪಂದಿಸುವ ಭರವಸೆಯನ್ನೂ ನೀಡಿದರು.

ಸಭೆಯಲ್ಲಿ ತಾಲೂಕು ದಂಡಾಧಿಕಾರಿ ವೈ. ರವಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಧುಸೂದನ್, ಸಹಾಯಕ ನಿರ್ದೇಶಕ ಮಾರುತಿ ಪ್ರಸಾದ್, ಸಿಡಿಪಿಒ ಮಮತಾ, ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಮೂರ್ತಿ ಸೇರಿದಂತೆ 34 ಗ್ರಾಮ ಪಂಚಾಯಿತಿಗಳ ಪಿಡಿಒಗಳು ಹಾಗೂ ವಾಟರ್‌ಮ್ಯಾನ್‌ಗಳು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *