ಸರ್ಕಾರಿ ಅನುದಾನ ದುರ್ಬಳಕೆ, ನೇಮಕಾತಿಯಲ್ಲಿ ಅಕ್ರಮದ ಆರೋಪ; ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಭೀಮ್ ಆರ್ಮಿ ಆಗ್ರಹ
ಹೊಸಪೇಟೆ (ಆ.10): ಬಳ್ಳಾರಿ, ವಿಜಯನಗರ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಉಜ್ಜನಿ ಜಗದ್ಗುರು ಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಅನುದಾನ ದುರ್ಬಳಕೆ, ನೇಮಕಾತಿಯಲ್ಲಿ ಅಕ್ರಮ ಹಾಗೂ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹಕ್ಕುಗಳಿಗೆ ಧಕ್ಕೆ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸಮಗ್ರ ಆಡಳಿತಾತ್ಮಕ ಹಾಗೂ ಕಾನೂನು ತನಿಖೆ ನಡೆಸಬೇಕು ಎಂದು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಒತ್ತಾಯಿಸಿದೆ.
ಸಂಘದಡಿ ಸುಮಾರು 23 ಪ್ರಾಥಮಿಕ ಶಾಲೆಗಳು, ನಾಲ್ಕು ಪ್ರೌಢಶಾಲೆಗಳು ಹಾಗೂ ಒಂದು ಪದವಿ ಪೂರ್ವ ಕಾಲೇಜು ಕಾರ್ಯನಿರ್ವಹಿಸುತ್ತಿವೆ ಎಂದು ಸಂಘಟನೆಗೆ ತಿಳಿದು ಬಂದಿದ್ದು . ಈ ಸಂಸ್ಥೆಯ ಆಡಳಿತಕ್ಕೆ ಸಂಬಂಧಿಸಿದ ಶ್ರೀ ಎಸ್.ಎಂ. ದಕ್ಷಿಣಮೂರ್ತಿ, ಶ್ರೀ ಎಸ್.ಎಂ. ಶಿವನಾಗ ಹಾಗೂ ಆಡಳಿತ ಮಂಡಳಿಯ ಇತರ ಸದಸ್ಯರು ಪರಿಶಿಷ್ಟರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸಿ, ಸರ್ಕಾರದಿಂದ ದೊರೆಯುವ ವಿವಿಧ ಅನುದಾನಗಳನ್ನು ಸಮರ್ಪಕವಾಗಿ ಬಳಸದೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.
ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಹಣ ಪಡೆದು ಅನರ್ಹರನ್ನು ನೇಮಕ ಮಾಡಲಾಗಿದೆ. ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ದೊರೆಯಬೇಕಾದ ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ, ಪ್ರೋತ್ಸಾಹಧನ ಹಾಗೂ ವಿವಿಧ ಇಲಾಖೆಗಳ ವಿಶೇಷ ಅನುದಾನಗಳಲ್ಲಿಯೂ ಅಕ್ರಮ ನಡೆದಿರುವ ಶಂಕೆಯಿದೆ ಎಂದು ಸಂಘಟನೆ ಹೇಳಿದೆ.
ಈ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ಸಂಬಂಧಿಸಿದ ಎಲ್ಲ ಇಲಾಖೆಗಳು ದಾಖಲೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಕ್ರಮ ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು. ಅಲ್ಲದೆ, ಬಾಧಿತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಸಂಘಟನೆ ಆಗ್ರಹಿಸಿದೆ.
ಒಂದು ವಾರದೊಳಗೆ ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳದಿದ್ದರೆ ಕಾನೂನುಬದ್ಧವಾಗಿ ಹೋರಾಟ ನಡೆಸಲಾಗುವುದು ಎಂದು ಸಂಘಟನೆ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದೆ.

