Breaking
Fri. Aug 21st, 2026

ದಂಡ ವಿಧಿಸುವುದು ಮುಖ್ಯವಲ್ಲ ಸವಾರರ ಪ್ರಾಣ ರಕ್ಷಣೆ ಮುಖ್ಯ : PSI ಮಹೇಶ್ ಲಕ್ಷ್ಮಣ್ ಹೊಸಪೇಟೆ

ಮೊಳಕಾಲ್ಮೂರು ಪಟ್ಟಣದಲ್ಲಿ ಸಂಚಾರ ಸುರಕ್ಷತೆ ಬಗ್ಗೆ ಅರಿವು

ಮೊಳಕಾಲ್ಮೂರು (ಆ.21): ಪಟ್ಟಣದ ಆರಕ್ಷಕ ಠಾಣೆ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಸಂಚಾರ ಸುರಕ್ಷತೆ ಮತ್ತು ವಾಹನ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಈ ಸಂದರ್ಭದಲ್ಲಿ ವಾಹನ ಸವಾರರಿಗೆ ಜಾಗೃತಿ ಮೂಡಿಸಿ ಮಾತನಾಡಿದ ಮೊಳಕಾಲ್ಮೂರು ಪಟ್ಟಣ ಆರಕ್ಷಕ ಠಾಣೆಯ ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಅವರು, “ನಮಗೆ ದಂಡ ವಿಧಿಸುವುದು ಮುಖ್ಯವಲ್ಲ. ಸವಾರರ ಪ್ರಾಣ ರಕ್ಷಣೆ ಮತ್ತು ಅವರ ಕುಟುಂಬದ ಸುರಕ್ಷತೆ ಮುಖ್ಯ” ಎಂದು ತಿಳಿಸಿದರು.

“ಪ್ರತಿ ದಿನ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ರಸ್ತೆ ಅಪಘಾತದಲ್ಲಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗುತ್ತದೆ. ನಮ್ಮ ಇಲಾಖೆಯಿಂದ ನಿರಂತರವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಲು ಜಾಗೃತಿ ಮೂಡಿಸುತ್ತಾ ಬಂದಿದ್ದೇವೆ. ಆದರೆ ಕೆಲವು ಸವಾರರ ನಿರ್ಲಕ್ಷ್ಯದಿಂದ ಅಪಘಾತಗಳು ತಪ್ಪುತ್ತಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇನ್ನು ಮುಂದೆ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು. ದ್ವಿಚಕ್ರ ವಾಹನದೊಂದಿಗೆ ಇತರೆ ವಾಹನ ಸವಾರರು ಕೂಡ ತಮ್ಮ ವಾಹನಕ್ಕೆ ಸಂಬಂಧಿಸಿದಂತೆ ಲೈಸೆನ್ಸ್, ಆರ್.ಸಿ, ಇನ್ಶೂರೆನ್ಸ್ ನಂತಹ ಸೂಕ್ತ ದಾಖಲೆಗಳನ್ನು ಹೊಂದಿರಬೇಕು. ನಿಯಮ ಉಲ್ಲಂಘಿಸಿದರೆ ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಪೊಲೀಸರಿಗೆ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಆದ್ದರಿಂದ ಎಲ್ಲರೂ ಜವಾಬ್ದಾರಿಯುತವಾಗಿ ವಾಹನ ಚಲಾಯಿಸಬೇಕು ಎಂದು PSI ಮಹೇಶ್ ಲಕ್ಷ್ಮಣ್ ಅವರು ವಾಹನ ಸವಾರರಿಗೆ ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಪಟ್ಟಣದ ಆರಕ್ಷಕ ಠಾಣೆಯ ಸಿಬ್ಬಂದಿ ವರ್ಗ, ವಾಹನ ಸವಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ತಪಾಸಣೆ ವೇಳೆ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಎಚ್ಚರಿಕೆ ನೀಡಿ ಬಿಡಲಾಯಿತು.

Related Post

Leave a Reply

Your email address will not be published. Required fields are marked *