Breaking
Fri. Aug 21st, 2026

ಹಿರಿಯ ಬಹುಭಾಷಾ ನಟಿ ಸೌಕಾರ್ ಜಾನಕಿ ಇನ್ನಿಲ್ಲ: 94ನೇ ವಯಸ್ಸಿನಲ್ಲಿ ನಿಧನ

ಏಳು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಮಿಂಚಿದ್ದ ಬಹುಭಾಷಾ ನಟಿಗೆ ಚಿತ್ರರಂಗದಿಂದ ಭಾವಪೂರ್ಣ ವಿದಾಯ

ಚೆನ್ನೈ, ಆ.21: ದಕ್ಷಿಣ ಭಾರತದ ಹಿರಿಯ ನಟಿ ಹಾಗೂ ಬಹುಭಾಷಾ ಕಲಾವಿದೆ ಸೌಕಾರ್ ಜಾನಕಿ ಅವರು ಶುಕ್ರವಾರ (ಆ.21) ನಿಧನರಾಗಿದ್ದಾರೆ. 94 ವರ್ಷ ವಯಸ್ಸಿನ ಅವರು, ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧ್ಯಾಹ್ನ 1.59ಕ್ಕೆ ಕೊನೆಯುಸಿರೆಳೆದಿರುವುದನ್ನು ನಡಿಗರ್ ಸಂಗಂ ಅಧ್ಯಕ್ಷ ನಾಸರ್ ದೃಢಪಡಿಸಿದ್ದಾರೆ.

ಸೌಕಾರ್ ಜಾನಕಿ ಅವರು ಏಳು ದಶಕಗಳಿಗೂ ಹೆಚ್ಚು ಕಾಲದ ತಮ್ಮ ಸುದೀರ್ಘ ಕಲಾ ಪಯಣದಲ್ಲಿ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದರು. 1950ರಲ್ಲಿ ಬಿಡುಗಡೆಯಾದ ತೆಲುಗಿನ ‘ಸೌಕಾರ್’ ಚಿತ್ರದ ಮೂಲಕ ಅವರಿಗೆ ಚಿತ್ರರಂಗದಲ್ಲಿ ಗುರುತಿನ ಹೆಸರು ದೊರೆಯಿತು. ಬಳಿಕ ಅವರು ನೂರಾರು ಚಿತ್ರಗಳಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಬುತ್ತಾ ದಕ್ಷಿಣ ಭಾರತದ ಪ್ರೇಕ್ಷಕರ ಮನ ಗೆದ್ದಿದ್ದರು. ಕನ್ನಡ ಚಿತ್ರರಂಗದಲ್ಲಿಯೂ ಸೌಕಾರ್ ಜಾನಕಿ ಅವರ ಕೊಡುಗೆ ಅಪಾರವಾಗಿದ್ದು. ವರನಟ ಡಾ. ರಾಜ್‌ಕುಮಾರ್ ಸೇರಿದಂತೆ ಹಲವು ಪ್ರಮುಖ ಕಲಾವಿದರೊಂದಿಗೆ ಅವರು ಅಭಿನಯಿಸಿದ್ದರು. ಅವರ ಅಭಿನಯದ ವೈವಿಧ್ಯತೆ ಹಾಗೂ ಪಾತ್ರಗಳಿಗೆ ತಕ್ಕಂತೆ ತಮ್ಮನ್ನು ರೂಪಿಸಿಕೊಳ್ಳುವ ಸಾಮರ್ಥ್ಯದಿಂದ ಅವರು ವಿಶೇಷ ಸ್ಥಾನ ಪಡೆದಿದ್ದರು.

ಅವರ ಚಿತ್ರರಂಗದ ಸೇವೆಗಾಗಿ ಅವರಿಗೆ ಹಲವು ಪ್ರಶಸ್ತಿ-ಪುರಸ್ಕಾರಗಳು ಲಭಿಸಿದ್ದು. 2022ರಲ್ಲಿ ಭಾರತ ಸರ್ಕಾರ ನೀಡುವ ಗೌರವಯುತ ʼಪದ್ಮಶ್ರೀ ಪ್ರಶಸ್ತಿʼಗೂ ಭಾಜನರಾಗಿದ್ದು. ಅವರ ಈ ನಿಧನದಿಂದ ದಕ್ಷಿಣ ಭಾರತೀಯ ಚಿತ್ರರಂಗದ ಒಂದು ಸುದೀರ್ಘ ಅಧ್ಯಾಯ ಅಂತ್ಯಗೊಂಡಂತಾಗಿದೆ.ಸೌಕಾರ್ ಜಾನಕಿ ಅವರ ಪಾರ್ಥಿವ ಶರೀರವನ್ನು ಚೆನ್ನೈನ ತೇನಾಂಪೇಟೆಯ ಸೆಂಟಾಫ್ ರಸ್ತೆಯಲ್ಲಿರುವ ಸ್ಥಳದಲ್ಲಿ ಸಂಜೆ 5 ಗಂಟೆಯಿಂದ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇರಿಸಲಾಗುವುದು ಎಂದು ನಾಸರ್ ತಿಳಿಸಿದ್ದಾರೆ. ಚಿತ್ರರಂಗದ ಗಣ್ಯರು, ಕಲಾವಿದರು ಹಾಗೂ ಅಭಿಮಾನಿಗಳು ಹಿರಿಯ ನಟಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ.

Related Post

Leave a Reply

Your email address will not be published. Required fields are marked *