Breaking
Sun. Nov 1st, 2026

ವಿಬಿ.ಜಿ.ರಾಮ್.ಜಿ ಯ 6 ವಾರಗಳ ಬಾಕಿ ಕೂಲಿ ಹಣ ಬಿಡುಗಡೆಗೆ ಗ್ರೂಕೂಸ್ ಆಗ್ರಹ

ಪಾವಗಡ: VB-G-RAM-G ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿಕಾರ್ಮಿಕರಿಗೆ ಕಳೆದ ಆರು ವಾರಗಳಿಂದ ಕೂಲಿ ಹಣ ಬಿಡುಗಡೆಯಾಗದಿರುವುದನ್ನು ಖಂಡಿಸಿ, ಬಾಕಿ ಕೂಲಿ ಹಾಗೂ ಎಸ್‌ಸಿ/ಎಸ್‌ಟಿ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಗ್ರಾಕೂಸ್ ಸಂಘಟನೆಯ ಪದಾಧಿಕಾರಿಗಳು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಧುಸೂಧನ್ ಅವರಿಗೆ ಮನವಿ ಸಲ್ಲಿಸಿದರು.

ಪಾವಗಡ ತಾಲೂಕಿನ ಕೊಡಮಡಗು, ವೆಂಕಟಪುರ, ದೊಮ್ಮತಮರಿ ಹಾಗೂ ರಂಗಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಕೂಲಿಕಾರ್ಮಿಕರು ಯೋಜನೆಯಡಿ ಕೆಲಸ ನಿರ್ವಹಿಸಿದ್ದರೂ, ಆರು ವಾರಗಳು ಕಳೆದರೂ ಕೂಲಿ ಹಣ ಕೈ ಸೇರಿಲ್ಲ ಎಂದು ಸಂಘಟನೆ ಮನವಿಯಲ್ಲಿ ತಿಳಿಸಿದೆ.

ದಿನಗೂಲಿ ಕೆಲಸವನ್ನೇ ನಂಬಿ ಜೀವನ ಸಾಗಿಸುವ ಬಡ ಕಾರ್ಮಿಕ ಕುಟುಂಬಗಳು ಕೂಲಿ ಹಣದ ವಿಳಂಬದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ದಿನನಿತ್ಯದ ಆಹಾರ, ಮಕ್ಕಳ ಶಿಕ್ಷಣ ಸೇರಿದಂತೆ ಅಗತ್ಯ ವೆಚ್ಚಗಳನ್ನು ನಿಭಾಯಿಸಲು ಕಾರ್ಮಿಕರು ಪರದಾಡುವಂತಾಗಿದೆ. ದುಡಿದ ಕೂಲಿಯನ್ನು ಸಕಾಲದಲ್ಲಿ ಪಾವತಿಸದಿರುವುದು ಕಾರ್ಮಿಕರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಸಂಘಟನೆಯು ಗಮನ ಸೆಳೆದಿದೆ.

ಕಾರ್ಮಿಕರು ಕೆಲಸ ಮಾಡಿದ ನಂತರವೂ ಕೂಲಿ ಹಣಕ್ಕಾಗಿ ವಾರಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಬಾಕಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಅಲ್ಲದೆ, ಎಸ್‌ಸಿ/ಎಸ್‌ಟಿ ಅನುದಾನವನ್ನೂ ಬಿಡುಗಡೆಗೊಳಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಕೂಲಿ ಹಣದ ವಿಳಂಬಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಂಡು ಕಾರ್ಮಿಕರಿಗೆ ಶೀಘ್ರ ನ್ಯಾಯ ಒದಗಿಸಬೇಕು ಎಂಬುದು ಸಂಘಟನೆಯ ಪ್ರಮುಖ ಬೇಡಿಕೆಯಾಗಿದೆ.ಈ ಸಂದರ್ಭದಲ್ಲಿ ಗ್ರಾಕೂಸ್ ಮಹಿಳಾ ಕಾರ್ಯಕರ್ತೆಯರಾದ ಅಶ್ವಿನಿ, ಮಮತಾ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *