ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಬರದ ನಡುವೆಯೂ ಸಮೃದ್ಧ ಬೆಳೆ
ಮೊಳಕಾಲ್ಮೂರು: ಮೊಳಕಾಲ್ಮೂರು ತಾಲೂಕು ಎಂದರೆ ಗುಡ್ಡಗಾಡು, ಕಲ್ಲು-ಬಂಡೆಗಳಿಂದ ಕೂಡಿದ ಬರಪೀಡಿತ ಪ್ರದೇಶ. ಇಲ್ಲಿ ಮಳೆ ಬೆಳೆ ಎಂಬುದು ಅತ್ಯಂತ ವಿರಳ. ಸಕಾಲಕ್ಕೆ ಮಳೆಯಾಗದೆ, ಅಂತರ್ಜಲ ಕುಸಿದು ಕೃಷಿ ಮಾಡುವುದೇ ಸವಾಲಿನ ಕೆಲಸವಾಗಿದೆ. ಇಂತಹ ಗುಡ್ಡಗಾಡು ಪ್ರದೇಶದಲ್ಲೂ ಛಲ ಬಿಡದೆ ಮೆಣಸಿನಕಾಯಿ ಬೆಳೆದು ಯಶಸ್ಸು ಕಂಡಿದ್ದಾರೆ ನಾಗಸಮುದ್ರ ಗ್ರಾಮದ ರೈತ ಮಹಿಳೆ ನರಸಮ್ಮ ಗೋವಿಂದಪ್ಪ ಅವರು.
ನಾಗಸಮುದ್ರ ಗ್ರಾಮದ ರೈತ ಕುಟುಂಬದ ನರಸಮ್ಮ ಅವರು ತಮ್ಮ ಜಮೀನಿನಲ್ಲಿ ಈ ಬಾರಿ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. ಬೆಳೆಗೆ ಬೇಕಾದ ನೀರು, ಗೊಬ್ಬರ, ಔಷಧ ಸಿಂಪರಣೆ, ಕಳೆ ತೆಗೆಯುವುದು ಸೇರಿದಂತೆ ಎಲ್ಲ ಕೆಲಸಗಳನ್ನು ತಾವೇ ನಿಂತು ಮಾಡಿದ್ದಾರೆ. ಅವರ ಈ ಶ್ರಮಕ್ಕೆ ಈಗ ತಕ್ಕ ಪ್ರತಿಫಲ ಸಿಕ್ಕಿದೆ.
ಈಗಾಗಲೇ ಕಟಾವಿಗೆ ಬಂದಿರುವ ಮೆಣಸಿನಕಾಯಿ ಬೆಳೆಯಲ್ಲಿ ಕಳೆದ ಮೂರು ದಿನಗಳಲ್ಲಿ ಸುಮಾರು 100 ಕ್ವಿಂಟಾಲ್ ಗಿಂತ ಹೆಚ್ಚು ಮೆಣಸಿನಕಾಯಿಯನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ಕಳುಹಿಸಿದ್ದಾರೆ. ಮುಂದಿನ ಹಂತದಲ್ಲಿ ಇನ್ನೂ 300 ಕ್ವಿಂಟಾಲ್ ವರೆಗೆ ಇಳುವರಿ ಬರುವ ನಿರೀಕ್ಷೆ ಇದೆ ಎಂದು ರೈತ ಕುಟುಂಬ ತಿಳಿಸಿದೆ.
ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯುವುದು ಅಷ್ಟು ಸುಲಭವಲ್ಲ. ಕೀಟಬಾಧೆ, ನೀರಿನ ಕೊರತೆ, ಮಾರುಕಟ್ಟೆ ಬೆಲೆ ಕುಸಿತದಂತಹ ಅನೇಕ ಸವಾಲುಗಳಿವೆ. ಆದರೆ ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ನರಸಮ್ಮ ಅವರು ಉತ್ತಮ ಬೆಳೆ ತೆಗೆದಿರುವುದು ಇಡೀ ನಾಗಸಮುದ್ರ ಗ್ರಾಮಕ್ಕೆ ಮಾದರಿಯಾಗಿದೆ.
ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಗೋವಿಂದಪ್ಪ ಎನ್.ಬಿ.
“ನಮ್ಮ ಮೊಳಕಾಲ್ಮೂರು ತಾಲೂಕು ಹಲವು ವರ್ಷಗಳಿಂದ ಬರಪೀಡಿತ ಪ್ರದೇಶವಾಗಿದೆ. ಗುಡ್ಡಗಾಡು ಪ್ರದೇಶದಲ್ಲಿ ಸರಿಯಾಗಿ ಮಳೆ ಬರದ ಕಾರಣ ಜನರು ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ನಮ್ಮ ನಾಗಸಮುದ್ರ ಗ್ರಾಮದ ರೈತ ಮಹಿಳೆ ನರಸಮ್ಮ ಅವರು ಗುಡ್ಡಗಾಡು ಪ್ರದೇಶದಲ್ಲೂ ಛಲ ಬಿಡದೆ ಮೆಣಸಿನಕಾಯಿ ಬೆಳೆದು ಸಾಧನೆ ಮಾಡಿದ್ದಾರೆ.
ರೈತರು ಕೃಷಿಯನ್ನು ಕೈಬಿಡದೆ, ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು, ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡಿದರೆ ಬರದಲ್ಲೂ ಬಂಗಾರ ಬೆಳೆಯಬಹುದು ಎಂಬುದಕ್ಕೆ ನರಸಮ್ಮ ಅವರೇ ಸಾಕ್ಷಿ. ಅವರ ಈ ಸಾಧನೆ ತಾಲೂಕಿನ ಎಲ್ಲ ರೈತ ಮಹಿಳೆಯರಿಗೆ ಸ್ಫೂರ್ತಿ. ಇಂತಹ ರೈತರಿಗೆ ಸರ್ಕಾರ ಹಾಗೂ ಕೃಷಿ ಇಲಾಖೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು” ಎಂದು ಗೋವಿಂದಪ್ಪ ಎನ್.ಬಿ. ಅವರು ತಿಳಿಸಿದ್ದಾರೆ.
ಒಟ್ಟಾರೆ ಗುಡ್ಡಗಾಡಿನ ಕಲ್ಲು-ಬಂಡೆಗಳ ನಡುವೆಯೂ ನರಸಮ್ಮ ಅವರ ಕೃಷಿ ಪ್ರೀತಿ, ಪರಿಶ್ರಮ ಇತರ ರೈತರಿಗೆ ಮಾದರಿಯಾಗಿದ್ದು, ನಾಗಸಮುದ್ರ ಗ್ರಾಮದಲ್ಲಿ ಈಗ ಮೆಣಸಿನಕಾಯಿ ಬೆಳೆಯದ್ದೇ ಮಾತು.

