Breaking
Sat. Oct 3rd, 2026

ಜಾತಿ ನಿಂದನೆ ಆರೋಪ: ಪತ್ರಕರ್ತನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಪಾವಗಡ: ದೂರವಾಣಿ ಸಂಭಾಷಣೆಯೊಂದರಲ್ಲಿ ಮಾದಿಗ ಸಮುದಾಯದ ಕಾಯಕದ ಕುರಿತು ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಮಾದಿಗ ಮಹಾಸಭಾ ಪದಾಧಿಕಾರಿಗಳು ಪಾವಗಡ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಹನುಮಂತನಹಳ್ಳಿ ಗ್ರಾಮದ ಪತ್ರಕರ್ತ ಎಚ್.ವಿ. ರಮೇಶ್ ಅವರು ವಕೀಲರೊಬ್ಬರನ್ನು ನಿಂದಿಸುವ ಬರದಲ್ಲಿ ದೂರವಾಣಿ ಮೂಲಕ ಮಾತನಾಡುತ್ತಾ. ಮಾದಿಗ ಸಮುದಾಯದ ಕಾಯಕವಾದ ‘ಮೆಟ್ಟು ಹೊಲೆಯುವ’ ಕುರಿತು ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಮಾತುಗಳು ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದು, ಪ್ರಕರಣವನ್ನು ಪರಿಶೀಲಿಸಿ ಕಾನೂನುಬದ್ಧ ಕ್ರಮ ಜರುಗಿಸಬೇಕು ಎಂದು ಮಹಾಸಭಾ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಈ ಕುರಿತು ಪಾವಗಡ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುರೇಶ್ ಅವರಿಗೆ ಮುಖಂಡರು ದೂರು ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಮುದಾಯದ ಮುಖಂಡರು, ಯಾವುದೇ ವ್ಯಕ್ತಿ ವೈಯಕ್ತಿಕ ಅಥವಾ ರಾಜಕೀಯ ವಿಚಾರಗಳ ಹಿನ್ನೆಲೆಯಲ್ಲಿ ಸಮುದಾಯದ ಕಾಯಕ ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪತ್ರಕರ್ತನ ಹೆಸರನ್ನು ಬಳಸಿಕೊಂಡು ಜಾತಿ ಸಂಘರ್ಷ ಹಾಗೂ ರಾಜಕೀಯ ಗೊಂದಲಕ್ಕೆ ಕಾರಣವಾಗುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ಅವರು ಎಚ್ಚರಿಸಿದರು.

ಈ ವೇಳೆ ಪಳವಳ್ಳಿ ಗೋವಿಂದಪ್ಪ, ಕಡಮಲಕುಂಟೆ ಹನುಮಂತರಾಯಪ್ಪ, ವಕೀಲ ಟಿ.ಎನ್. ಪೇಟೆ ರಮೇಶ್, ದೇವಲಕೆರೆ ಪಿ. ಲಿಂಗಣ್ಣ, ಕಡಪಲಕೆರೆ ನರಸಿಂಹಪ್ಪ, ನಲಿಗಾನಹಳ್ಳಿ ಮಂಜುನಾಥ್ ಹಾಗೂ ವೈ.ಎನ್.ಹಳ್ಳಿ ಸುಬ್ಬಾರಾಯಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *