ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಇಂದು ಆಯೋಜಿಸಲಾಗಿದ್ದ ಕೆಸಿಸಿ (KCC) ಸಾಲ ವಿತರಣಾ ಸಮಾರಂಭವನ್ನು ಶಾಸಕ ಎಚ್.ವಿ. ವೆಂಕಟೇಶ್ ಅವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಬಟನ್ ಒತ್ತುವ ಮೂಲಕ ಅರ್ಹ ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸಾಲದ ಮೊತ್ತವನ್ನು ನೇರವಾಗಿ ವರ್ಗಾವಣೆ ಮಾಡಲಾಯಿತು.
ನಂತರ ಮಾತನಾಡಿದ ಶಾಸಕ ಎಚ್.ವಿ. ವೆಂಕಟೇಶ್ ಅವರು, ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಆರ್ಥಿಕ ನೆರವು ಒದಗಿಸುವಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರೈತರು ಕೃಷಿ ಕಾರ್ಯಗಳಿಗೆ ಎದುರಿಸುವ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಸಿಸಿ ಸಾಲ ಯೋಜನೆ ಸಹಕಾರಿಯಾಗಿದೆ. ಅರ್ಹ ರೈತರು ಸಹಕಾರ ಸಂಘಗಳ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಂಗಮಪ್ಪ, ಕರ್ನಾಟಕ ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ನಾಮಿನಿ ನಿರ್ದೇಶಕ ಎನ್. ರವಿ, ಸಂಘದ ಅಧ್ಯಕ್ಷ ಪಾಲಾನಾಯ್ಕ್, ಉಪಾಧ್ಯಕ್ಷ ಪೆದ್ದರೆಡ್ಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪುರುಷೋತ್ತಮ್ ರೆಡ್ಡಿ, ಮುಖಂಡರಾದ ಹನುಮಂತರಾಯಪ್ಪ, ಕೆ.ಎನ್. ಮಂಜುನಾಥ್, ನಾರಾಯಣ, ಕೆ.ಬಿ. ನಾಗರಾಜ್, ಅಂಜನ್ ರೆಡ್ಡಿ ಉಪಸ್ಥಿತರಿದ್ದರು.ಡಿಸಿಸಿ ಬ್ಯಾಂಕ್ ಸಿಬ್ಬಂದಿಗಳಾದ ಸೀನಪ್ಪ, ನಾಗೇಂದ್ರ, ಸೇವಾನಾಯ್ಕ್, ಸೋಮಶೇಖರ್ ಸೇರಿದಂತೆ ಸಂಘದ ನಿರ್ದೇಶಕರು, ಷೇರುದಾರರು ಹಾಗೂ ಸ್ಥಳೀಯ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

