ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದೆ ಎನ್ನಲಾದ ಸುಮಾರು ₹126 ಕೋಟಿ ಮೌಲ್ಯದ ವಿವಿಧ ಕಾಮಗಾರಿಗಳು, ಖರೀದಿ ಹಾಗೂ ಸೇವಾ ಪ್ರಕ್ರಿಯೆಗಳಲ್ಲಿ ನಿಯಮ ಉಲ್ಲಂಘನೆ ಮತ್ತು ಹಣಕಾಸು ಅಕ್ರಮ ಭ್ರಷ್ಟಚಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಸ್ವತಂತ್ರ ಹಾಗೂ ಉನ್ನತ ಮಟ್ಟದ ತನಿಖೆ ನಡೆಸುವಂತೆ ವಕೀಲ ಕಾರ್ತಿಕ್ ಜಿ.ಎನ್. ಆಗ್ರಹಿಸಿದ್ದಾರೆ.
ಸೆ.19ರಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ರಸ್ತೆ ಅಭಿವೃದ್ಧಿ, ಕಟ್ಟಡ ಮತ್ತು ಶೌಚಾಲಯ ನವೀಕರಣ, ಐಟಿ ಮೂಲಸೌಕರ್ಯ, ಡೇಟಾ ಸೆಂಟರ್, ನೆಟ್ವರ್ಕ್, ಪೀಠೋಪಕರಣ, ವಿದ್ಯುದೀಕರಣ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ KTPP Act, Karnataka State Universities Act, 2000 ಹಾಗೂ ವಿಶ್ವವಿದ್ಯಾನಿಲಯದ ಹಣಕಾಸು ಮತ್ತು ಟೆಂಡರ್ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕೆಂದು ಒತ್ತಾಯಿಸಲಾಗಿದೆ.
RUSA ಅನುದಾನದಡಿ ನಡೆದ ಕಾಮಗಾರಿಗಳು, ಆನ್ಲೈನ್ ಕಾರ್ಯಕ್ರಮಗಳು, ಭದ್ರತಾ ಸೇವೆಗಳ ಟೆಂಡರ್ ಹಾಗೂ ಇತರೆ ಕಾಮಗಾರಿಗಳಲ್ಲಿ ಟೆಂಡರ್ ಪ್ರಕ್ರಿಯೆ, ತಾಂತ್ರಿಕ ಮತ್ತು ಹಣಕಾಸು ಮೌಲ್ಯಮಾಪನ, ಸಿಂಡಿಕೇಟ್ ಅನುಮೋದನೆ, ವರ್ಕ್ ಆರ್ಡರ್, ಮೆಜರ್ಮೆಂಟ್ ಬುಕ್, ಬಿಲ್ ಮತ್ತು ಪಾವತಿ ದಾಖಲೆಗಳನ್ನು ಪರಿಶೀಲಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ವಿಶ್ವವಿದ್ಯಾನಿಲಯದ ದಾಖಲೆಗಳಲ್ಲಿ ಉಲ್ಲೇಖವಾಗಿರುವ ವಿವಿಧ ಕಾಮಗಾರಿಗಳ ಪೈಕಿ RUSAಗೆ ₹32 ಕೋಟಿ, ಭದ್ರತೆ ಸೇರಿದಂತೆ ಇತರ ಸೇವೆಗಳಿಗೆ ₹8 ಕೋಟಿ, ಎಂಜಿನಿಯರಿಂಗ್ ವಿಭಾಗಕ್ಕೆ ₹8 ಕೋಟಿ ಹಾಗೂ Wi-Fi ಮತ್ತು CCTV ವಾರ್ಷಿಕ ನಿರ್ವಹಣೆಗೆ ₹1.10 ಕೋಟಿ ಸೇರಿದಂತೆ ಹಲವು ಮೊತ್ತಗಳನ್ನು ಉಲ್ಲೇಖಿಸಲಾಗಿದೆ.
ಮೂರನೇ ವ್ಯಕ್ತಿಯ ತಪಾಸಣೆ, ಕಾಮಗಾರಿಗಳ ಗುಣಮಟ್ಟ ಹಾಗೂ ಪಾವತಿಗಳಲ್ಲಿಯೂ ಅಕ್ರಮಗಳಾಗಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಲೋಕಾಯುಕ್ತ ಅಥವಾ ವಿಶೇಷ ತನಿಖೆ ಮೂಲಕ ಸಮಗ್ರ ಪರಿಶೀಲನೆ ನಡೆಸಿ, ಅಕ್ರಮ ಪಾವತಿ ಅಥವಾ ಸಾರ್ವಜನಿಕ ಹಣಕ್ಕೆ ನಷ್ಟ ಸಾಬೀತಾದರೆ ಹೊಣೆಗಾರರಿಂದ ಹಣ ವಸೂಲಿ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮೈಸೂರು ವಿವಿಯ ಕಾಮಗಾರಿಗಳಲ್ಲಿ ₹126 ಕೋಟಿ ಭ್ರಷ್ಟಾಚಾರದ ಆರೋಪ; ವಕೀಲ ಕಾರ್ತಿಕ್ ಜಿ.ಎನ್ ತನಿಖೆಗೆ ಆಗ್ರಹ

