Breaking
Wed. Oct 28th, 2026

ಲೋಕೋಪಯೋಗಿ ಇಲಾಖೆಯ 4ಜಿ ಕಾಮಗಾರಿಗಳ ತನಿಖೆಗೆ ಆಗ್ರಹ

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಕಟ್ಟಡಗಳ ವಿಭಾಗ–1, ಕಟ್ಟಡಗಳ ವಿಭಾಗ–2 ಹಾಗೂ ವಿದ್ಯುತ್ ವಿಭಾಗಗಳಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ, 1999ರ ಕಲಂ 4(ಜಿ) ಅಡಿಯಲ್ಲಿ ವಿನಾಯಿತಿ ನೀಡಿ ವಹಿಸಿರುವ ಕಾಮಗಾರಿಗಳ ಕುರಿತು ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸಬೇಕೆಂದು ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.

ಈ ಸಂಬಂಧ ಸಂಘದ ರಾಜ್ಯಾಧ್ಯಕ್ಷ ಡಾ. ಎಸ್. ಸಂಗಮೇಶ್ ಅವರು ಅಕ್ಟೋಬರ್ 27ರಂದು ಲೋಕೋಪಯೋಗಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿ, ಕಾಮಗಾರಿಗಳ ಕಾನೂನುಬದ್ಧತೆ, ಟೆಂಡರ್ ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ಸಾರ್ವಜನಿಕ ಹಣದ ಬಳಕೆಯ ಕುರಿತು ಸಮಗ್ರ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದ್ದಾರೆ.

4(ಜಿ) ವಿನಾಯಿತಿಯಡಿ ವಹಿಸಲಾದ ಕಾಮಗಾರಿಗಳಿಗೆ ಸಾರ್ವಜನಿಕ ಪ್ರಕಟಣೆ ಅಥವಾ ಜಾಹೀರಾತು ನೀಡಲಾಗಿದೆಯೇ? ನೀಡಿದ್ದರೆ ಯಾವ ಪತ್ರಿಕೆಯಲ್ಲಿ, ಯಾವ ದಿನಾಂಕದಂದು ಪ್ರಕಟಿಸಲಾಗಿದೆ? ಎಂಬುದನ್ನು ಸ್ಪಷ್ಟಪಡಿಸಬೇಕು. ವಿನಾಯಿತಿ ನೀಡಲು ದಾಖಲಿಸಿರುವ ಕಾರಣಗಳು, ಆಡಳಿತಾತ್ಮಕ ಅನುಮೋದನೆಗಳು ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಸಂಘ ಮನವಿಯಲ್ಲಿ ತಿಳಿಸಿದೆ.

ಸರ್ಕಾರದ ಹಣ ಉಳಿತಾಯವಾಗಿದೆಯೇ?

ವಿನಾಯಿತಿ ಮೂಲಕ ಕಾಮಗಾರಿಗಳನ್ನು ವಹಿಸುವುದರಿಂದ ಸರ್ಕಾರಕ್ಕೆ ಎಷ್ಟು ಆರ್ಥಿಕ ಉಳಿತಾಯವಾಗಿದೆ ಎಂಬುದನ್ನು ದಾಖಲೆಗಳೊಂದಿಗೆ ಬಹಿರಂಗಪಡಿಸಬೇಕು. ಕಾಮಗಾರಿಗಳ ಅಂದಾಜು ಮೊತ್ತ, ಗುತ್ತಿಗೆ ಮೊತ್ತ, ಅಂತಿಮ ಪಾವತಿ ಹಾಗೂ ಟೆಂಡರ್ ಮೂಲಕ ವಹಿಸಿದ್ದರೆ ತಗಲಬಹುದಾಗಿದ್ದ ವೆಚ್ಚವನ್ನು ಹೋಲಿಕೆ ಮಾಡಿ ಸ್ವತಂತ್ರ ಹಣಕಾಸು ಮತ್ತು ತಾಂತ್ರಿಕ ಲೆಕ್ಕಪರಿಶೋಧನೆ ನಡೆಸಬೇಕೆಂದು ಒತ್ತಾಯಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಅನ್ವಯಿಸುವ ಮೀಸಲಾತಿ ನೀತಿಯ ಅನುಷ್ಠಾನಕ್ಕೂ 4(ಜಿ) ವಿನಾಯಿತಿಯಿಂದ ಯಾವುದೇ ಧಕ್ಕೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸಂಘ ಕೋರಿದೆ.

ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳು, ಕಾರ್ಯಾದೇಶಗಳು, ಒಪ್ಪಂದಗಳು, ಅಳತೆ ಪುಸ್ತಕಗಳು, ಬಿಲ್‌ಗಳು ಮತ್ತು ಪಾವತಿ ದಾಖಲೆಗಳನ್ನು ಸಂರಕ್ಷಿಸಿ, ಸ್ವತಂತ್ರ ತನಿಖಾ ಸಮಿತಿ ರಚಿಸಬೇಕು. ನಿಯಮ ಉಲ್ಲಂಘನೆ ಅಥವಾ ಸರ್ಕಾರಿ ಹಣಕ್ಕೆ ನಷ್ಟವಾಗಿರುವುದು ದೃಢಪಟ್ಟರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಸಚಿವರು ಮನವಿ ಸ್ವೀಕರಿಸಿದ 15 ದಿನಗಳೊಳಗೆ ಪ್ರಾಥಮಿಕ ಪರಿಶೀಲನೆ ನಡೆಸಿ ಲಿಖಿತ ಉತ್ತರ ನೀಡಬೇಕು. ಪ್ರತಿಕ್ರಿಯೆ ದೊರೆಯದಿದ್ದರೆ ಮಾಹಿತಿ ಹಕ್ಕು ಕಾಯ್ದೆ, ಮೇಲಧಿಕಾರಿಗಳಿಗೆ ದೂರು ಹಾಗೂ ನ್ಯಾಯಾಲಯದ ಮೂಲಕ ಕಾನೂನುಬದ್ಧ ಕ್ರಮ ಕೈಗೊಳ್ಳುವುದಾಗಿ ಡಾ. ಸಂಗಮೇಶ್ ತಿಳಿಸಿದ್ದಾರೆ.

“ಸರ್ಕಾರದ ಹಣ ಸಾರ್ವಜನಿಕರ ಹಣ. ಪ್ರತಿಯೊಂದು ರೂಪಾಯಿಗೂ ಲೆಕ್ಕ ಇರಬೇಕು. ನಮ್ಮ ಉದ್ದೇಶ ಆರೋಪ ಮಾಡುವುದಲ್ಲ; ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುವುದು,” ಎಂದು ಅವರು ಹೇಳಿದ್ದಾರೆ.

Related Post

Leave a Reply

Your email address will not be published. Required fields are marked *