ಕೊಟ್ಟೂರು, ಆ.24: ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.
ಜಿಲ್ಲಾ ಸಂಘಟನಾ ಸಂಚಾಲಕ ಬದ್ದಿ ಮರಿಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದಲಿತ ಸಂಘರ್ಷ ಸಮಿತಿ ಯಾವುದೇ ರಾಜಕೀಯ ಪಕ್ಷವಲ್ಲ. ದಲಿತರ ರಕ್ಷಣೆ, ಶಿಕ್ಷಣ ಮತ್ತು ಸಂಘಟನೆಗಾಗಿ ಕಾರ್ಯನಿರ್ವಹಿಸುವ ಸಂಘಟನೆಯಾಗಿದೆ ಎಂದು ಹೇಳಿದರು.
ದಲಿತ ಸಮುದಾಯದ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಮುದಾಯದವರು ಸಂಘಟಿತರಾಗಬೇಕು. ಈ ಉದ್ದೇಶದಿಂದಲೇ ಹಿರಿಯರು ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿಕೊಂಡು ಬಂದಿದ್ದಾರೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಆರ್. ಶ್ರೀನಿವಾಸ್ ಅವರನ್ನು ಕೊಟ್ಟೂರು ತಾಲೂಕು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಇದೇ ವೇಳೆ ವಿವಿಧ ಪದಾಧಿಕಾರಿಗಳನ್ನೂ ನೇಮಕ ಮಾಡಲಾಯಿತು.
ಬಣಕಾರ ಕೆಂಚಪ್ಪ, ಬಸನಾಳ ಸುರೇಶ್, ಪೂಜಾರ್ ಚಂದ್ರಶೇಖರ್, ಹನುಮನಹಳ್ಳಿ ಪ್ರದೀಪ್, ಬೇವೂರು ಶಂಕ್ರಪ್ಪ ಹಾಗೂ ಕೆ. ರಾಜು ಅವರನ್ನು ಸಂಘಟನಾ ಜವಾಬ್ದಾರಿಗಳಿಗೆ ನೇಮಕ ಮಾಡಲಾಯಿತು. ಗುಲಾಬಿ ದುರ್ಗೇಶ್ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಒಕ್ಕೂಟವನ್ನು ರಚಿಸಲಾಗಿದ್ದು, ಪೂಜಾರ್ ಪುರಸಪ್ಪ ಸೇರಿದಂತೆ ಹಲವರನ್ನು ಸಲಹೆಗಾರರಾಗಿ ನೇಮಕ ಮಾಡಲಾಯಿತು.
ಸಭೆಯಲ್ಲಿ ಸಮಿತಿಯ ಮುಂದಿನ ಸಂಘಟನಾ ಚಟುವಟಿಕೆಗಳು, ದಲಿತ ಸಮುದಾಯದ ಸಮಸ್ಯೆಗಳು ಹಾಗೂ ಹಕ್ಕುಗಳ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು.

