Breaking
Wed. Nov 25th, 2026

ರೈತರ ಜಮೀನಿಗೆ ಅರಣ್ಯ ಇಲಾಖೆ ಬೇಲಿ: ತೆರವುಗೊಳಿಸುವಂತೆ ರೈತ ಸಂಘದ ಆಗ್ರಹ

ಪಾವಗಡ: ಬಗರ್‌ಹುಕುಂ ಯೋಜನೆಯಡಿ ಮಂಜೂರಾಗಿದ್ದು, ರೈತರ ಹೆಸರಿನಲ್ಲಿ ಪಹಣಿ ದಾಖಲೆ ಹೊಂದಿರುವ ಜಮೀನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಲಿ ಹಾಕಿದ್ದಾರೆ ಎಂದು ಆರೋಪಿಸಿ, ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ಶ್ರೀರಂಗಪುರ ಗ್ರಾಮದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು.

ಗ್ರಾಮದ ಸರ್ವೆ ನಂ. 52ರಲ್ಲಿರುವ ಗೋಮಾಳ ಜಮೀನಿನಲ್ಲಿ ನಾರಾಯಣಪ್ಪ, ವೆಂಕಟರಮಣಪ್ಪ, ಮಂಗಮ್ಮ ಹಾಗೂ ಸೀನಪ್ಪ ಎಂಬ ರೈತರು ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. 2004ರಲ್ಲಿ ಶಾಸಕರಾಗಿದ್ದ ಸರ್ಕಾರಿ ವೆಂಕಟರಮಣಪ್ಪ ಅವರ ಅವಧಿಯಲ್ಲಿ ಬಗರ್‌ಹುಕುಂ ಯೋಜನೆಯಡಿ ಸದರಿ ರೈತರಿಗೆ ಜಮೀನು ಮಂಜೂರಾಗಿದೆ. ಅಲ್ಲದೆ, ರೈತರ ಹೆಸರಿನಲ್ಲಿ ಪಹಣಿ ದಾಖಲೆಗಳೂ ಲಭ್ಯವಿವೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ಬೇಲಿ ಹಾಕಿರುವುದು ಅನ್ಯಾಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಬೇಲಿ ತೆರವುಗೊಳಿಸಿ ರೈತರಿಗೆ ನ್ಯಾಯ ಒದಗಿಸಿ

ರೈತರಿಗೆ ಕಾನೂನುಬದ್ಧವಾಗಿ ಮಂಜೂರಾಗಿರುವ ಜಮೀನಿಗೆ ಹಾಕಿರುವ ಬೇಲಿಯನ್ನು ಕೂಡಲೇ ತೆರವುಗೊಳಿಸಿ, ಜಮೀನನ್ನು ರೈತರ ವಶಕ್ಕೆ ಹಿಂದಿರುಗಿಸಬೇಕು. ರೈತರ ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಮೂಲಕ ಆಡಳಿತ ಅಧಿಕಾರಿಗಳು ತೊಂದರೆ ನೀಡಬಾರದು ಎಂದು ಪೂಜಾರಪ್ಪ ಒತ್ತಾಯಿಸಿದರು.

ಸಂಬಂಧಪಟ್ಟ ಸರ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಜಮೀನಿನ ದಾಖಲೆಗಳನ್ನು ಪರಿಶೀಲಿಸಿ ಸಮಗ್ರ ಸರ್ವೆ ನಡೆಸಬೇಕು. ರೈತರ ಹಕ್ಕುಗಳಿಗೆ ಧಕ್ಕೆಯಾಗದಂತೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ರೈತರ ಹಿತದೃಷ್ಟಿಯಿಂದ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶಿವು, ಮಾನಂ ಶಶಿಕಿರಣ್, ಗೋಪಾಲ, ನಾಗರಾಜಪ್ಪ, ಸುಧಾಮಣಿ, ಶಿವಕುಮಾರ್, ಶಿವಪ್ಪ, ಶ್ರೀನಿವಾಸ್ ಸೇರಿದಂತೆ ರೈತರು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *