Breaking
Thu. Nov 5th, 2026

ವಕೀಲರ ಮೇಲೆ ಹಲ್ಲೆ, ಹತ್ಯೆಗೆ ಖಂಡನೆ: ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯ

ಪಾವಗಡ: ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಕೊಲೆ ಹಾಗೂ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ, ವಕೀಲರ ರಕ್ಷಣಾ ಕಾಯ್ದೆಯನ್ನು ಬಲಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಾವಗಡ ತಾಲೂಕು ವಕೀಲರ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದ ವಕೀಲರು, ನ್ಯಾಯಾಲಯದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇತ್ತೀಚೆಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ವಕೀಲ ಮಂಜುನಾಥ್ ಹಾಗೂ ಅನ್ನಪೂರ್ಣೇಶ್ವರಿ ನಗರದಲ್ಲಿ ವಕೀಲ ಶ್ರೀರಾಮ್ ಅವರ ಹತ್ಯೆ, ಗೌರಿಬಿದನೂರಿನ ವಕೀಲ ವೆಂಕಟ್ರಮಣ ಸನ್ನಕ್ಕಿ ಅವರ ಮೇಲಿನ ಕೊಲೆಯತ್ನ ಸೇರಿದಂತೆ ರಾಜ್ಯದ ವಿವಿಧೆಡೆ ವಕೀಲರ ಮೇಲೆ ನಡೆಯುತ್ತಿರುವ ದಾಳಿಗಳು ವಕೀಲ ಸಮುದಾಯದಲ್ಲಿ ಆತಂಕ ಮೂಡಿಸಿವೆ. ವಕೀಲರ ವೃತ್ತಿಪರ ಸುರಕ್ಷತೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವಕೀಲರ ಮೇಲೆ ಹಲ್ಲೆ, ದೌರ್ಜನ್ಯ ಹಾಗೂ ಹತ್ಯೆ ಪ್ರಕರಣಗಳನ್ನು ತಡೆಯಲು ಪ್ರತ್ಯೇಕ ಮತ್ತು ಪರಿಣಾಮಕಾರಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು. ವೃತ್ತಿ ಸ್ಥಳಗಳಲ್ಲಿ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು. ಹತ್ಯೆಗೀಡಾದ ವಕೀಲರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಕಾನೂನು ನೆರವು ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಕೀಲರು ರಸ್ತೆ ತಡೆ ನಡೆಸಿ ಮಾನವ ಸರಪಳಿ ನಿರ್ಮಿಸುವ ಮೂಲಕ ಸರ್ಕಾರದ ಗಮನ ಸೆಳೆದರು. ವಕೀಲರ ಜೀವ, ವೃತ್ತಿ ಸ್ವಾತಂತ್ರ್ಯ, ಸುರಕ್ಷತೆ ಮತ್ತು ಸ್ವಾಭಿಮಾನವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ವಿಳಂಬ ಮಾಡದೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ರಂಗನಾಥಪ್ಪ, ಕಾರ್ಯದರ್ಶಿ ಚಂದ್ರಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳಾದ ರಘುನಂದನ್, ಸಿ.ಎನ್. ರೆಡ್ಡಿ, ಟಿ.ಎನ್. ಪೇಟೆ ರಮೇಶ್, ನಾಗಭೂಷಣ್, ವಿ.ಡಿ. ವೆಂಕಟಸ್ವಾಮಿ, ತಿರುಮಲೇಶ್, ಪೆದ್ದಯ್ಯ, ಜಯಸಿಂಹ, ಮಲ್ಲೇಶ್, ಅಂಬರೀಶ್, ಅಕ್ಕಲಪ್ಪ, ಅಂಜಿಗೌಡ, ರಮೇಶ್, ರಮ್ಯಾ, ಭಾರತಿ, ಆಶ್ವಿನಿ, ಆಂಜನೇಯ ಸೇರಿದಂತೆ ಹಲವು ವಕೀಲರು ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *