Breaking
Sun. Aug 30th, 2026

ನೇತ್ರದಾನದಿಂದ ಇಬ್ಬರ ಬದುಕಿಗೆ ಬೆಳಕು: ಡಾ. ಕೆ.ಆರ್. ಕಿಶೋರ್

ಪಾಂಡವಪುರ: ತಾಲೂಕಿನ ಕ್ಯಾತನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ.ಆರ್. ಕಿಶೋರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನೇತ್ರದಾನವು ಪ್ರತಿಯೊಬ್ಬರೂ ಮಾಡಬಹುದಾದ ಅತ್ಯಂತ ಶ್ರೇಷ್ಠ ದಾನ ಹಾಗೂ ಮಾನವೀಯ ಸೇವೆಯಾಗಿದೆ ಎಂದು ಹೇಳಿದರು.ಒಬ್ಬ ವ್ಯಕ್ತಿಯ ನೇತ್ರದಾನದಿಂದ ಇಬ್ಬರು ದೃಷ್ಟಿಹೀನರ ಬಾಳಿಗೆ ಬೆಳಕು ನೀಡಲು ಸಾಧ್ಯವಾಗುತ್ತದೆ. ಮರಣದ ನಂತರ ಕೇವಲ ಆರು ಗಂಟೆಗಳ ಒಳಗಾಗಿ ನೇತ್ರಗಳನ್ನು ಸಂಗ್ರಹಿಸಬೇಕಾಗಿದ್ದು, ನೇತ್ರ ಸಂಗ್ರಹಣೆಯ ಪ್ರಕ್ರಿಯೆ ಸುಮಾರು 20 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ. ನೇತ್ರಗಳನ್ನು ಸಂಗ್ರಹಿಸಿದ ಬಳಿಕ ಮೃತರ ಮುಖದಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ನೇತ್ರ ಸಂಗ್ರಹಣೆ ಹಾಗೂ ವಿತರಣಾ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದೆ ಎಂದು ಅವರು ವಿವರಿಸಿದರು.ನೇತ್ರದಾನದ ಕುರಿತು ಸಮಾಜದಲ್ಲಿ ಇರುವ ಮೂಢನಂಬಿಕೆಗಳನ್ನು ದೂರ ಮಾಡಬೇಕು. ‘ಈ ಜನ್ಮದಲ್ಲಿ ಕಣ್ಣು ದಾನ ಮಾಡಿದರೆ ಮುಂದಿನ ಜನ್ಮದಲ್ಲಿ ಕುರುಡರಾಗುತ್ತಾರೆ’ ಎಂಬ ತಪ್ಪು ಕಲ್ಪನೆಯನ್ನು ತೊರೆದು, ನೇತ್ರದಾನದ ಮೂಲಕ ಮತ್ತೊಬ್ಬರ ಜೀವನಕ್ಕೆ ಬೆಳಕು ನೀಡುವ ಮಾನವೀಯ ಕಾರ್ಯಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಡಾ. ಕಿಶೋರ್ ಕರೆ ನೀಡಿದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ ಎನ್.ಸಿ. ಮಾತನಾಡಿ, ‘ದೃಷ್ಟಿಹೀನತೆಯ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ’ ಎಂಬ ಘೋಷವಾಕ್ಯದೊಂದಿಗೆ ನೇತ್ರದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ‘ಜೀವ ಸಾರ್ಥಕತೆ’ ವೆಬ್‌ಸೈಟ್‌ನಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುವ ಮೂಲಕ, ಮರಣದ ನಂತರವೂ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯ ಮಾಡಬಹುದು ಎಂದು ತಿಳಿಸಿದರು.ನೇತ್ರದಾನ ಮಾಡಲು ಅನುಸರಿಸಬೇಕಾದ ಕ್ರಮಗಳ ಕುರಿತು ಅವರು ವಿವರಿಸಿದರು.ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಅನಿತಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಜಯಶೀಲಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *