Breaking
Tue. Jan 27th, 2026

ಬೆಂಗಳೂರು: ರಾಜ್ಯದಲ್ಲಿ ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡುವ ಮತ್ತು ದೇವದಾಸಿಗೆ ಜನಿಸಿದ ಮಗು ತನ್ನ ತಂದೆಯನ್ನು ಗುರುತಿಸಲು (ಪಿತೃತ್ವ) ಹಕ್ಕು ಹಾಗೂ ಸಮಗ್ರ ಪುನರ್ವಸತಿ ಕಲ್ಪಿಸಲು ಅವಕಾಶ ನೀಡುವ, ‘ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ– 2025’ ಅನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ.

ಆ ಮೂಲಕ, ದೇವದಾಸಿ ಮಹಿಳೆಯರನ್ನು ಎಲ್ಲ ರೀತಿಯ ಶೋಷಣೆಗಳಿಂದ ಹಾಗೂ ಅವರ ಮಕ್ಕಳನ್ನು ಸಾಮಾಜಿಕ ನಿಷೇಧದಿಂದ ಮುಕ್ತಗೊಳಿಸುವ ದಿಸೆಯಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ ಸಿದ್ಧಪಡಿಸಿರುವ ಕರಡು ಮಸೂದೆಗೆ ಸಂಬಂಧಿಸಿದಂತೆ 20 ಇಲಾಖೆಗಳ ಜೊತೆ ಸಮಾಲೋಚನೆ ನಡೆಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಮಸೂದೆಗೆ ಅಂತಿಮ ರೂಪ ನೀಡಿದೆ. ಕಾನೂನು ಮತ್ತು ಸಂಸದೀಯ ಇಲಾಖೆಯು ಈ ಮಸೂದೆಯನ್ನು ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ.

ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲು ಚಿಂತನೆ ನಡೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿದ್ದು.

ಹೊಸ ಮಸೂದೆಯ ಕಾರಣಕ್ಕೆ ‘ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ) ಕಾಯ್ದೆ– 1982’ ಮತ್ತು ‘ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ ಮತ್ತು ತಿದ್ದುಪಡಿ ) ಕಾಯ್ದೆ, 2009’ ರದ್ದುಗೊಳ್ಳಲಿವೆ.

ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಯಾದಗಿರಿ, ವಿಜಯನಗರ ಈ ಜಿಲ್ಲೆಗಳಲ್ಲಿ ದೇವದಾಸಿಯರಿದ್ದಾರೆ ಗುರುತಿಸಲಾಗಿ.

ಪಿತೃತ್ವ ಹಕ್ಕು, ಜೀವನಾಂಶ, ಪುನರ್ವಸತಿ:

ದೇವದಾಸಿಗೆ ಜನಿಸಿದ ಯಾವುದೇ ಮಗುವು ತಂದೆಯ ಗುರುತು ಖಚಿತಪಡಿಸಿಕೊಳ್ಳುವ ಹಕ್ಕುನ್ನು ಈ ಮಸೂದೆ ಕಲ್ಪಿಸಿದೆ. ಅಂತಹ ಮಗುವು ತಂದೆಯ ಬಂಧದ ಮಾನ್ಯತೆಗಾಗಿ ತಾಲ್ಲೂಕು ಸಮಿತಿಗೆ ಅರ್ಜಿ ಸಲ್ಲಿಸಬಹುದು.

ಜೈವಿಕ ತಂದೆ ಒಪ್ಪಿಕೊಂಡರೆ ಆ ಬಗ್ಗೆ ಲಿಖಿತವಾಗಿ ಜಿಲ್ಲಾ ಸಮಿತಿಯ ಮುಂದೆ ಅರ್ಜಿ ಸಲ್ಲಿಸಬಹುದು. ಅಲ್ಲಿ ತಂದೆ ಮತ್ತೊಮ್ಮೆ ಬಹಿರಂಗವಾಗಿ ಮತ್ತು ಲಿಖಿತವಾಗಿ ಅಂತಹ ಸಂಬಂಧವನ್ನು ಒಪ್ಪಿಕೊಳ್ಳಬೇಕು. ತಂದೆಯು ಒಪ್ಪಿಕೊಳ್ಳಲು ನಿರಾಕರಿಸಿದರೆ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಮಗುವು ತನ್ನ ಜೈವಿಕ ತಂದೆ ಎಂದು ಭಾವಿಸುವ ವ್ಯಕ್ತಿಯ ಪಿತೃತ್ವವನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಡಿಎನ್ಎ ಪರೀಕ್ಷೆ ನಡೆಸಬಹುದು. ಅಂತಹ ಮಗುವಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಉಚಿತ ಕಾನೂನು ನೆರವು ಒದಗಿಸಬೇಕು.

ಶಿಕ್ಷೆ ಮತ್ತು ದಂಡ:

ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದ ಬಳಿಕ ದೇವದಾಸಿಯಾಗಿ ಮಹಿಳೆಯನ್ನು ಅರ್ಪಿಸುವ ಯಾವುದೇ ಸಮಾರಂಭ ಅಥವಾ ಕಾರ್ಯವನ್ನು ತನ್ನ ನಿಯಂತ್ರಣದಲ್ಲಿರುವ ಆವರಣದಲ್ಲಿ ನಿರ್ವಹಿಸಲು, ಅನುಮತಿಸಲು, ಭಾಗವಹಿಸಲು ಅಥವಾ ಪ್ರಚೋದಿಸಲು ಯಾರು ಅನುಮತಿ ನೀಡುತ್ತಾರೊ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಸಮಾರಂಭ ಅಥವಾ ಕೃತ್ಯವನ್ನು ಎಸಗುತ್ತಾರೊ ಅದನ್ನು ಅಪರಾಧವೆಂದು ಪರಿಗಣಿಸಿ ಎರಡು ವರ್ಷದಿಂದ ಐದು ವರ್ಷಗಳವರೆಗೆ ವಿಸ್ತರಿ ಸಬಹುದಾದ ಜೈಲು ಶಿಕ್ಷೆ ಅಥವಾ ₹1 ಲಕ್ಷಕ್ಕೆ ಕಡಿಮೆ ಇಲ್ಲದಂತೆ ದಂಡ ವಿಧಿಸಲು ಅವಕಾಶ ಆಗಲಿದೆ.

ದೇವದಾಸಿ ಪದ್ಧತಿಗೆ ಉತ್ತೇಜನ ಅಥವಾ ಪ್ರಚಾರ ಮಾಡಿದರೆ ಒಂದು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ /₹50 ಸಾವಿರಕ್ಕೆ ಕಡಿಮೆ ಇಲ್ಲದಂತೆ ದಂಡ ಅಥವಾ ಎರಡನ್ನೂ ವಿಧಿಸ ಲಾಗುವುದು. ಶಿಕ್ಷೆಗೆ ಒಳಗಾಗಿರುವವರು ಅಪರಾಧ ಪುನರಾವರ್ತಿಸಿದರೆ 7 ವರ್ಷಗಳ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹2 ಲಕ್ಷವರೆಗೆ ವಿಸ್ತರಿಸಬಹುದಾದ ದಂಡ ಶಿಕ್ಷೆಗೆ ಗುರಿಯಾಗಲಿದ್ದಾರೆ.

ಅಂಕಣ : ರಾಜೇಶ್‌ ರೈ ಚಟ್ಲ್‌ ( ಕೃಪೆ: ಪ್ರಜಾ ವಾಣಿ )

Related Post

Leave a Reply

Your email address will not be published. Required fields are marked *