ಕೊಪ್ಪಳ: ತಾಲ್ಲೂಕಿನ ದೋಟಿಹಾಳ-ಕೇಸೂರು ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಭಕ್ತಿಭಾವ, ಸಡಗರ ಹಾಗೂ ವಿಜೃಂಭಣೆಯಿಂದ ನಡೆಯಿತು. ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಸಂಭ್ರಮಿಸಿದರು.
ಜಾತ್ರೆಯ ಅಂಗವಾಗಿ ಬೆಳಿಗ್ಗೆ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ನೆರವೇರಿದವು. ಬಳಿಕ ನಾಲ್ಕು ನವದಂಪತಿಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಇದೇ ವೇಳೆ ವೀರಭದ್ರನ ಅವತಾರಿಗಳಾದ ಪುರವಂತರು ಸಾಂಪ್ರದಾಯಿಕ ನೃತ್ಯಾಭಿನಯದ ಮೂಲಕ ವೀರಭದ್ರೇಶ್ವರನ ಕಥಾ ಪ್ರಸಂಗವನ್ನು ಪ್ರಸ್ತುತಪಡಿಸಿ ಭಕ್ತರ ಗಮನ ಸೆಳೆದರು.
ಮಧ್ಯಾಹ್ನ 12.30ರ ವೇಳೆಗೆ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ವೀರಗಾಸೆ ಸೇವೆ ಹಾಗೂ ಅಗ್ನಿಕುಂಡ ಸೇವೆ ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳು ಜರುಗಿದವು. ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ದೇವಸ್ಥಾನ ಸಮಿತಿ ವತಿಯಿಂದ ಪ್ರಸಾದ ವಿತರಿಸಲಾಯಿತು.
ಸಂಜೆ ಕಳಸ ಹಾಗೂ ಡೊಳ್ಳಿನ ಮೇಳದೊಂದಿಗೆ ಹುಚ್ಚಯ್ಯ ರಥೋತ್ಸವದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿದ ರಥೋತ್ಸವ ಮೆರವಣಿಗೆ ಬಳಿಕ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣ ತಲುಪಿತು. ಈ ವೇಳೆ ಭಕ್ತರು ಭಕ್ತಿ ಹಾಗೂ ಉತ್ಸಾಹದಿಂದ ಪಾಲ್ಗೊಂಡು ರಥೋತ್ಸವವನ್ನು ಕಣ್ತುಂಬಿಕೊಂಡರು.
ಈ ವೇಳೆ ದೇವಸ್ಥಾನ ಸಮಿತಿಯ ಉಮೇಶ್ ಮಡಿವಾಳರ್, ಶುಕಮನಿ ಇಳಗೇರ್, ವಿಷ್ಣು ಅಂಗಡಿ, ಶೇಖರಪ್ಪ ಅಲ್ವಿ, ಮಲ್ಲಯ್ಯ ಹಜ್ಜಾರ, ಕಲಕೇರಿಯ ಶರಣಯ್ಯ ಸ್ವಾಮಿಗಳು, ಶರಣಪ್ಪ ಮೇಟಿ, ಶಿವು ಹಗರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

