ವೈಎನ್ ಹೊಸಕೋಟೆ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಿಕೆ; ಮೂಲಸೌಕರ್ಯಕ್ಕೆ ಸಾರ್ವಜನಿಕರ ಆಗ್ರಹ
ಪಾವಗಡ(ಅ.16): ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ವೈಎನ್ ಹೊಸಕೋಟೆ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ನಿಲ್ದಾಣದಾದ್ಯಂತ ಕಸ, ಧೂಳು ಹಾಗೂ ದುರ್ವಾಸನೆ ಆವರಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಸ್ ನಿಲ್ದಾಣದ ಮೇಲ್ಭಾಗದಲ್ಲಿರುವ ನಾಮಫಲಕ ಅಳಿಸಿಹೋಗಿದ್ದು, ಗೋಡೆಗಳು ಕಪ್ಪು ಕಲೆಗಳಿಂದ ಕೂಡಿವೆ. ನಿಲ್ದಾಣದ ನೆಲದಲ್ಲಿ ಅಳವಡಿಸಿರುವ ಟೈಲ್ಸ್ಗಳು ಕಿತ್ತುಹೋಗಿದ್ದು, ಅಲ್ಲಲ್ಲಿ ಕಸ ಮತ್ತು ತೆಂಗಿನ ಗರಿಗಳು ಬಿದ್ದಿವೆ. ಸ್ವಚ್ಛತೆಯ ಕೊರತೆಯಿಂದ ನಿಲ್ದಾಣದ ಪರಿಸರ ಅಸ್ವಚ್ಛವಾಗಿದ್ದು, ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಬಸ್ ನಿಲ್ದಾಣದ ಒಳಭಾಗದಲ್ಲಿ ಬಸ್ಗಳ ಸಂಚಾರ ಮತ್ತು ನಿಲುಗಡೆಗೆ ಬದಲಾಗಿ ಬೈಕ್ಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ನಿಲ್ದಾಣದ ಬಳಕೆಯ ಉದ್ದೇಶವೇ ವ್ಯರ್ಥವಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ನಿತ್ಯ ನೂರಾರು ವಿದ್ಯಾರ್ಥಿಗಳು, ರೈತರು, ಮಹಿಳೆಯರು ಹಾಗೂ ಕಾರ್ಮಿಕರು ಸಾರಿಗೆ ಸೌಲಭ್ಯಕ್ಕಾಗಿ ಈ ನಿಲ್ದಾಣವನ್ನು ಅವಲಂಬಿಸಿದ್ದಾರೆ. ಆದರೆ, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ಆಸನಗಳು, ಕುಡಿಯುವ ನೀರು ಮತ್ತು ಶೌಚಾಲಯದಂತಹ ಮೂಲಭೂತ ಸೌಕರ್ಯಗಳಿಲ್ಲದಿರುವುದು ತೀವ್ರ ಸಮಸ್ಯೆಯಾಗಿದೆ.
ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶ್ನೆ
ಪ್ರಮುಖ ಹೋಬಳಿ ಕೇಂದ್ರದಲ್ಲಿರುವ ಬಸ್ ನಿಲ್ದಾಣವೇ ಇಂತಹ ದುಸ್ಥಿತಿಯಲ್ಲಿದ್ದರೆ ಸಾರ್ವಜನಿಕ ಸೌಕರ್ಯಗಳ ನಿರ್ವಹಣೆ ಹೇಗೆ ನಡೆಯುತ್ತಿದೆ ಎಂಬ ಪ್ರಶ್ನೆಯನ್ನು ಸ್ಥಳೀಯರು ಎತ್ತಿದ್ದಾರೆ. ಸ್ವಚ್ಛತೆ ಕಾಪಾಡುವಲ್ಲಿ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪವೂ ಕೇಳಿಬಂದಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ, ಹಾಳಾಗಿರುವ ಟೈಲ್ಸ್ಗಳನ್ನು ದುರಸ್ತಿಪಡಿಸಿ, ಕುಡಿಯುವ ನೀರು, ಶೌಚಾಲಯ ಮತ್ತು ಆಸನಗಳ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿಲ್ದಾಣವನ್ನು ಅಭಿವೃದ್ಧಿಪಡಿಸಿ, ನಿರಂತರ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
