ಪಾವಗಡ: ಶಿಶು ಅಭಿವೃದ್ಧಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ಪೋಷಣ್ ಮಾಸಾಚರಣೆಯ ಅಂಗವಾಗಿ ತಾಲೂಕಿನ ವೈ.ಎನ್. ಹೊಸಕೋಟೆ ವ್ಯಾಪ್ತಿಯ ಚೌಡೇಶ್ವರಿ ವೃತ್ತದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ, ಪೌಷ್ಟಿಕ ಆಹಾರ ಮತ್ತು ತಾಯಿ-ಮಗುವಿನ ಆರೈಕೆಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು. ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರ ಸೇವನೆ, ನಿಯಮಿತ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಮುನ್ನೆಚ್ಚರಿಕೆಗಳನ್ನು ಪಾಲಿಸುವ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಲಾಯಿತು.
ಜಿಲ್ಲಾ ನಿರೂಪಣಾಧಿಕಾರಿ ಅನುಷಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸರ್ಕಾರದ ವತಿಯಿಂದ ದೊರೆಯುವ ವಿವಿಧ ಸೌಲಭ್ಯಗಳು ಹಾಗೂ ಪೌಷ್ಟಿಕ ಆಹಾರದ ಮಹತ್ವದ ಕುರಿತು ಮಾಹಿತಿ ನೀಡಿದರು. ಮಕ್ಕಳ ಸಮಗ್ರ ಬೆಳವಣಿಗೆಗೆ ಪೌಷ್ಟಿಕ ಆಹಾರ, ಆರೋಗ್ಯಕರ ವಾತಾವರಣ ಮತ್ತು ಸರಿಯಾದ ಆರೈಕೆ ಅಗತ್ಯವಾಗಿದೆ ಎಂದು ತಿಳಿಸಿದರು.
ತಾಲೂಕು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೈಯದ್ ರಕೀಬ್ ಉಲ್ಲಾ, ಮೇಲ್ವಿಚಾರಕರಾದ ಜಯಲಕ್ಷ್ಮಿ ಹಾಗೂ ಮಮತಾ, ಪೋಷಣ್ ಸಂಯೋಜಕಿ ಮಂಜುಳಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಬಾಣಂತಿಯರು, ಗರ್ಭಿಣಿಯರು, ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳು, ಅಂಗನವಾಡಿ ಸಹಾಯಕಿಯರು, ಮಹಿಳೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಗರ್ಭಿಣಿಯರಿಗೆ ಸಾಂಪ್ರದಾಯಿಕವಾಗಿ ಸೀಮಂತ ನೆರವೇರಿಸಿ, ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಶುಭ ಹಾರೈಸಲಾಯಿತು.

