Site icon NBTV Kannada

ಅರಣ್ಯದ ಅರಿವಿನತ್ತ ವಿದ್ಯಾರ್ಥಿಗಳ ಪಯಣ

ಚಿಣ್ಣರ ವನದರ್ಶನ ಪ್ರವಾಸಕ್ಕೆ ಶಾಸಕ ಹೆಚ್.ವಿ. ವೆಂಕಟೇಶ್ ಚಾಲನೆ

ಪಾವಗಡ: ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಪರಿಸರ ಸಂರಕ್ಷಣೆ, ಅರಣ್ಯ ಮತ್ತು ವನ್ಯಜೀವಿಗಳ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ಅರಣ್ಯ ಇಲಾಖೆ ಆಯೋಜಿಸಿರುವ ಒಂದು ದಿನದ ‘ಚಿಣ್ಣರ ವನದರ್ಶನ’ ಕಾರ್ಯಕ್ರಮಕ್ಕೆ ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್ ಅವರು ಚಾಲನೆ ನೀಡಿದರು.

ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು, ಹನುಮಂತನಹಳ್ಳಿ ಗ್ರಾಮದ ಗೇಟ್ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರು ಪ್ರವಾಸಕ್ಕೆ ಹಸಿರು ನಿಶಾನೆ ತೋರುವ ಮೂಲಕ ವಿದ್ಯಾರ್ಥಿಗಳ ಪ್ರಯಾಣಕ್ಕೆ ಶುಭಾರಂಭ ಮಾಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಿದ ಶಾಸಕರು, ಮಕ್ಕಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು. ಪ್ರವಾಸವನ್ನು ಸಂತೋಷದಿಂದ ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದ ಅವರು, ಅರಣ್ಯ, ವನ್ಯಜೀವಿಗಳು ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತುಕೊಳ್ಳಬೇಕು. ಪ್ರಕೃತಿಯ ಸಂಪತ್ತನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಅರಣ್ಯ ಇಲಾಖೆಯ ಚಿಣ್ಣರ ವನದರ್ಶನ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತರಗತಿಯ ಪಠ್ಯಪುಸ್ತಕಗಳ ಜ್ಞಾನಕ್ಕಿಂತ ಭಿನ್ನವಾದ ಪ್ರಾಯೋಗಿಕ ಅನುಭವ ಒದಗಿಸುವ ಮಹತ್ವದ ಪ್ರಯತ್ನವಾಗಿದೆ. ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜೀವವೈವಿಧ್ಯ, ವನ್ಯಜೀವಿಗಳ ಬದುಕು ಹಾಗೂ ಪ್ರಕೃತಿಯ ಸಮತೋಲನವನ್ನು ನೇರವಾಗಿ ವೀಕ್ಷಿಸುವ ಅವಕಾಶ ಈ ಪ್ರವಾಸದ ಮೂಲಕ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಇದರಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮತ್ತು ಪ್ರಕೃತಿ ಸಂರಕ್ಷಣೆಯ ಬದ್ಧತೆ ಬೆಳೆಯಲು ಸಹಕಾರಿಯಾಗಲಿದೆ.

ಕಾರ್ಯಕ್ರಮದಲ್ಲಿ ಆರ್‌ಎಫ್‌ಒ ರಾಕೇಶ್, ಡಿಆರ್‌ಎಫ್‌ಒ ಸಲಾರ್ ಅಹ್ಮದ್, ರಾಘವೇಂದ್ರ, ರಘುವೀರ ರೆಡ್ಡಿ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version