ಪಾವಗಡ: ತಾಲೂಕಿನ ಕೊಡಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಮಡಗು ಗ್ರಾಮದ ಕೆರೆಯಲ್ಲಿ ವಿ.ಬಿ.-ಜಿ-ರಾಮ್-ಜಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಕಳೆದ ಎರಡು ತಿಂಗಳಿಂದ ಕೂಲಿ ಹಣ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಬಾಕಿ ಕೂಲಿ ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ಗ್ರಾಮದ ಕೆರೆಯಲ್ಲಿ 150ಕ್ಕೂ ಹೆಚ್ಚು ಕಾರ್ಮಿಕರು ವಿವಿಧ ಕಾಮಗಾರಿಗಳಲ್ಲಿ ದುಡಿಯುತ್ತಿದ್ದಾರೆ ಎನ್ನಲಾಗಿದ್ದು, ಪ್ರತಿದಿನದ ದುಡಿಮೆಯನ್ನೇ ಅವಲಂಬಿಸಿರುವ ಕುಟುಂಬಗಳಿಗೆ ಕೂಲಿ ಹಣ ಸಮಯಕ್ಕೆ ಸಿಗದಿರುವುದು ತೀವ್ರ ತೊಂದರೆ ಉಂಟುಮಾಡಿದೆ. ಮನೆ ಖರ್ಚು, ಮಕ್ಕಳ ವಿದ್ಯಾಭ್ಯಾಸ, ಚೀಟಿ ಹಣ ಸೇರಿದಂತೆ ಅಗತ್ಯ ವೆಚ್ಚಗಳನ್ನು ಭರಿಸಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.ಕೂಲಿ ಹಣ ವಿಳಂಬವಾಗಿರುವ ಕುರಿತು ಮಾತನಾಡಿದ ಕಾರ್ಮಿಕರು, ಕಾಮಗಾರಿಯಲ್ಲಿ ನಿಯಮಿತವಾಗಿ ಕೆಲಸ ಮಾಡುತ್ತಿದ್ದರೂ ಎರಡು ತಿಂಗಳಿಂದ ಹಣ ಖಾತೆಗೆ ಜಮೆಯಾಗಿಲ್ಲ. ದಿನನಿತ್ಯದ ಜೀವನ ನಿರ್ವಹಣೆಗೆ ಕೂಲಿ ಹಣವೇ ಪ್ರಮುಖ ಆದಾಯವಾಗಿದ್ದು, ಹಣ ಪಾವತಿಯಾಗದಿರುವುದರಿಂದ ಸಾಲ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ದಾರೆ.ಕೂಲಿ ಕಾರ್ಮಿಕರಾದ ನಾರಾಯಣಪ್ಪ, ಜೈಲಕ್ಷ್ಮಮ್ಮ, ಶಾಂತಮ್ಮ, ಪಿ. ನಾಗೇಂದ್ರಯ್ಯ, ಶೇಷಪ್ಪ, ತಿಮ್ಮಪ್ಪ, ನಾಗೇಂದ್ರ, ವರಲಕ್ಷ್ಮಿ, ಶಿಲ್ಪ, ನರಸಿಂಹಪ್ಪ, ಅಂಜಪ್ಪ ಹಾಗೂ ಗೋವಿಂದಪ್ಪ ಸೇರಿದಂತೆ ಹಲವರು ತಮ್ಮ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರು.ಈ ಸಂದರ್ಭದಲ್ಲಿ ಗ್ರಾಕೂಸ್ ತಾಲೂಕು ಕಾರ್ಯಕರ್ತರಾದ ಮಮತ, ಆಶ್ವಿನಿ ಹಾಗೂ ಮೇಟ್‌ಗಳಾದ ಮೂರ್ತಿ, ಅಭಿಲಾಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬಾಕಿ ಉಳಿದಿರುವ ಕೂಲಿ ಹಣವನ್ನು ಶೀಘ್ರವಾಗಿ ಪಾವತಿಸಿ ಕಾರ್ಮಿಕರ ಸಂಕಷ್ಟಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.
ಎರಡು ತಿಂಗಳಿಂದ ಕೂಲಿ ಬಾಕಿ: ಸಂಕಷ್ಟದಲ್ಲಿ ವಿಬಿ.ಜಿ.ರಾಮ್.ಜಿ ಫಲಾನುಭವಿಗಳು

