ಪಾವಗಡ, (ನ.3): ತಾಲೂಕಿನ ವಳ್ಳೂರು ಗ್ರಾಮದ ಎಸ್.ಸಿ. ಕಾಲೋನಿ ವ್ಯಾಪ್ತಿಯಲ್ಲಿ ನರಿ ದಾಳಿ ನಡೆಸಿದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.
ಗ್ರಾಮದ ಹೊರವಲಯದಲ್ಲಿ ಬಹಿರ್ದೆಸೆಗೆ ತೆರಳಿದ್ದ ಮುತ್ಯಾಲಮ್ಮ (52) ಅವರ ಮೇಲೆ ನರಿ ಏಕಾಏಕಿ ದಾಳಿ ಮಾಡಿದೆ. ಮೂಗು, ಕಣ್ಣು ಮತ್ತು ಹಣೆ ಭಾಗಕ್ಕೆ ಕಚ್ಚಿ ತೀವ್ರ ಗಾಯಗೊಳಿಸಿದೆ. ರಕ್ತಸ್ರಾವದಿಂದ ನರಳುತ್ತಿದ್ದ ಅವರನ್ನು ರಕ್ಷಿಸಲು ಬಂದ ರಾಮಣ್ಣ (56) ಮತ್ತು ಉಷಾ (50) ಅವರ ಮೇಲೂ ನರಿ ದಾಳಿ ನಡೆಸಿದೆ.
ಸ್ಥಳೀಯರು ತಕ್ಷಣ ಮೂವರನ್ನು ತಿರುಮಣಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜನವಸತಿ ಪ್ರದೇಶದ ಸಮೀಪವೇ ಈ ದಾಳಿ ನಡೆದಿರುವುದು ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.
ನಾಯಿಗಳ ದಾಳಿಗೆ ನರಿ ಸಾವು
ಗಾಬರಿಗೊಂಡು ಗ್ರಾಮದ ಒಳಗೆ ಬಂದ ನರಿಯನ್ನು ಬೀದಿ ನಾಯಿಗಳು ಕಚ್ಚಿ ಸಾಯಿಸಿವೆ ಎಂದು ತಿಳಿದುಬಂದಿದೆ. ತೀವ್ರವಾಗಿ ಗಾಯಗೊಂಡಿರುವ ಮುತ್ಯಾಲಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಆಂಬುಲೆನ್ಸ್‌ಗೆ ಡೀಸೆಲ್ ಹಣ ಕೇಳಿದ ಸಿಬ್ಬಂದಿ – ಆಡಳಿತಾಧಿಕಾರಿ ನೆರವು
ಘಟನೆ ತಿಳಿದು ವಲಯ ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಚಿಕಿತ್ಸಾ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದಾರೆ.ಆದರೆ ತುಮಕೂರಿಗೆ ಹೋಗಲು ಆಂಬುಲೆನ್ಸ್‌ಗೆ 3 ಸಾವಿರ ರೂ. ಡೀಸೆಲ್ ಹಣ ಕೊಡಬೇಕು ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದು, ಕಡುಬಡವರಾದ ಮುತ್ಯಾಲಮ್ಮ ಕುಟುಂಬ ಕಂಗಾಲಾಗಿತ್ತು. ವಿಷಯ ತಿಳಿದ ಪತ್ರಕರ್ತರು ತಕ್ಷಣ ತಾಲೂಕು ಆಡಳಿತಾಧಿಕಾರಿ ನವೀನ್ ಅವರಿಗೆ ವಿಷಯ ತಿಳಿಸಿದಾಗ, ಅವರು ತಕ್ಷಣ ಸ್ಪಂದಿಸಿ ಉಚಿತವಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಿ ತುಮಕೂರಿಗೆ ಕಳುಹಿಸಿಕೊಟ್ಟರು. ಇಂತಹ ತುರ್ತು ಪ್ರಕರಣಗಳಲ್ಲಿ ಬಡವರಿಂದ ಆಂಬುಲೆನ್ಸ್‌ಗೆ ಹಣ ಕೇಳದೆ ಉಚಿತವಾಗಿ ಸಾಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

