Site icon NBTV Kannada

ಅಪೂರ್ಣ ಕಾಮಗಾರಿಯಿಂದ ದಲಿತರ ಬದುಕು ಸಂಕಷ್ಟ; ಶಾಶ್ವತ ಪರಿಹಾರಕ್ಕೆ ದ.ಸಂ.ಸ ಆಗ್ರಹ

ಪಾವಗಡ (ಅ.10): ತಾಲೂಕಿನ ಅರಸೀಕೆರೆ ಗ್ರಾಮದ ದಲಿತ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಕಳಪೆ ಗುಣಮಟ್ಟದ ರಸ್ತೆ ಮತ್ತು ಚರಂಡಿ ಕಾಮಗಾರಿಯಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಗಳನ್ನು ಕೂಡಲೇ ಪರಿಹರಿಸದಿದ್ದರೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ದಲಿತ ಸಂಘರ್ಷ ಸಮಿತಿ (ದ.ಸಂ.ಸ) ಎಚ್ಚರಿಕೆ ನೀಡಿದೆ.

ಗ್ರಾಮದ ದಲಿತ ಕಾಲೋನಿಯಲ್ಲಿ ಲಕ್ಷಾಂತರ ರೂಪಾಯಿ ಅನುದಾನದಲ್ಲಿ ನಿರ್ಮಿಸಿರುವ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ಆರೋಪ ಕೇಳಿಬಂದಿದೆ. ಚರಂಡಿ ನಿರ್ಮಾಣದಲ್ಲಿ ಸಮರ್ಪಕ ಇಳಿಜಾರು ಕಲ್ಪಿಸದ ಕಾರಣ ಮಳೆನೀರು ಹಾಗೂ ಕೊಳಚೆ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಲ್ಲುತ್ತಿದೆ. ಇದರಿಂದ ಕೊಳಚೆ ನೀರು ಮನೆಗಳ ಮುಂದೆ ಸಂಗ್ರಹವಾಗುವುದಲ್ಲದೆ, ಕೆಲವು ಮನೆಗಳ ಒಳಗೂ ನುಗ್ಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ.

ನಿಂತ ನೀರಿನಿಂದ ದುರ್ವಾಸನೆ ಹರಡುತ್ತಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಮಕ್ಕಳು, ವೃದ್ಧರು ಸೇರಿದಂತೆ ಕಾಲೋನಿ ನಿವಾಸಿಗಳು ಆರೋಗ್ಯದ ಸಮಸ್ಯೆಗಳ ಭೀತಿಯಲ್ಲಿ ಬದುಕುವಂತಾಗಿದೆ. ಮತ್ತೊಂದೆಡೆ, ಇತ್ತೀಚೆಗೆ ನಿರ್ಮಿಸಿರುವ ಸಿಸಿ ರಸ್ತೆಯೂ ಕೆಲವೇ ದಿನಗಳಲ್ಲಿ ಕಿತ್ತುಬರುತ್ತಿದೆ. ಕಾಮಗಾರಿಯಲ್ಲಿ ಕಡಿಮೆ ಪ್ರಮಾಣದ ಸಿಮೆಂಟ್ ಬಳಸಿ, ಹೆಚ್ಚಿನ ಮರಳು ಮಿಶ್ರಣ ಮಾಡಿರುವುದರಿಂದ ರಸ್ತೆ ಗುಣಮಟ್ಟ ಕಳೆದುಕೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಸಮಸ್ಯೆಗಳ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದು ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ತಾಲ್ಲೂಕು ಆಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕು. ಕಳಪೆ ಕಾಮಗಾರಿ ಕುರಿತು ಸಮಗ್ರ ತನಿಖೆ ನಡೆಸಿ, ಚರಂಡಿ ನೀರು ಮನೆಗಳಿಗೆ ನುಗ್ಗದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ದಲಿತರ ಕಾಲೋನಿಯ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಕಾಮಗಾರಿ ಪೂರ್ಣಗೊಳಿಸದೆ ಕಾಲಹರಣ ಮಾಡಿದರೆ ಪಾವಗಡ ತಾಲ್ಲೂಕು ಕಚೇರಿ ಎದುರು ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕರಾದ ವೆಂಕಟರಮಣ ಮತ್ತು ಕೆ.ಪಿ. ಲಿಂಗಣ್ಣ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.

Exit mobile version