Site icon NBTV Kannada

ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಶಾಂತರಾಜ್ ಡಿ. ದಕ್ಕಲಿಗ ನೇಮಕಕ್ಕೆ ಆಗ್ರಹ.

ಬೆಂಗಳೂರು: ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಶಾಂತರಾಜ್ ಡಿ. ದಕ್ಕಲಿಗ ಅವರನ್ನು ನೇಮಕ ಮಾಡಬೇಕು ಎಂದು ಕರ್ನಾಟಕ ರಾಜ್ಯ ಅಲೆಮಾರಿ ಪರಿಶಿಷ್ಟ ಸಮುದಾಯಗಳ ರಾಜ್ಯ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.ಈ ಕುರಿತು ಒಕ್ಕೂಟದ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿಲಾಗಿದೆ.

ಅಲೆಮಾರಿ ಸಮುದಾಯಗಳ ಅನೇಕ ಕುಟುಂಬಗಳು ಇಂದಿಗೂ ಶಿಕ್ಷಣ, ವಸತಿ, ಉದ್ಯೋಗ, ಭೂಮಿ ಹಾಗೂ ಸಾಮಾಜಿಕ ಭದ್ರತೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಹೀಗಾಗಿ ಸಮುದಾಯಗಳ ನೈಜ ಸಮಸ್ಯೆಗಳನ್ನು ಅರಿತಿರುವ ವ್ಯಕ್ತಿಗೆ ನಿಗಮದ ಜವಾಬ್ದಾರಿ ನೀಡುವ ಅಗತ್ಯವಿದೆ ಎಂದು ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.

ಶಾಂತರಾಜ್ ಅವರು ಕಳೆದ ಸುಮಾರು 30 ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಅಲೆಮಾರಿ ಸಮುದಾಯಗಳ ಸಮಸ್ಯೆಗಳನ್ನು ನೇರವಾಗಿ ಅರಿತುಕೊಂಡಿದ್ದಾರೆ. 49ಕ್ಕೂ ಹೆಚ್ಚು ಅಲೆಮಾರಿ ಹಾಗೂ ಸಂಬಂಧಿತ ಸಮುದಾಯಗಳ ಸಮಸ್ಯೆಗಳ ಕುರಿತು ನಿರಂತರವಾಗಿ ಕೆಲಸ ಮಾಡಿರುವ ಅನುಭವವನ್ನು ಪರಿಗಣಿಸಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಆಗ್ರಹಿಸಲಾಗಿದ್ದು.

ಅಲೆಮಾರಿ ಸಮುದಾಯಗಳಿಗೆ 1% ಒಳಮೀಸಲಾತಿ ಕಲ್ಪಿಸುವುದು, ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ಪರಿಗಣಿಸುವುದು, ಪ್ರತ್ಯೇಕ ಅಭಿವೃದ್ಧಿ ನಿಗಮ ಹಾಗೂ ವಿಶೇಷ ಬಜೆಟ್‌ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.ಅಳಿವಿನಂಚಿನಲ್ಲಿರುವ ಮಾದಿಗ ಸಂಬಂಧಿತ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ಆದ್ಯತೆ ನೀಡಬೇಕು ಮತ್ತು ನಾಯಕತ್ವದ ಅವಕಾಶ ಕಲ್ಪಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳ ಮುಖಂಡರು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮನವಿಯನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಮಾಡಲಾಗಿದೆ.

Exit mobile version