Site icon NBTV Kannada

ಗಡಿನಾಡಿನಲ್ಲಿ ಕನ್ನಡ ಭಾಷಾಭಿಮಾನಕ್ಕೆ ಸಾಕ್ಷಿಯಾದ ರಾಜ್ಯೋತ್ಸವ ಸಂಭ್ರಮ

ಪಾವಗಡ(ಮದ್ಧೆ): ಕನ್ನಡವೇ ನಮ್ಮ ಉಸಿರು, ಕನ್ನಡವೇ ನಮ್ಮ ಹೆಮ್ಮೆ, ಕನ್ನಡವೇ ನಮ್ಮ ಅಸ್ಮಿತೆ ಎಂಬ ಘೋಷವಾಕ್ಯದೊಂದಿಗೆ ಪಾವಗಡ ತಾಲ್ಲೂಕಿನ ಮದ್ಧೆ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆ.ಎಂ. ಚೇತನ್ ಬಾಬು ಅವರು ಗ್ರಾಮದ ಹಿರಿಯರು, ಮುಖಂಡರು, ಯುವಕರು ಹಾಗೂ ಕನ್ನಡಾಭಿಮಾನಿಗಳೊಂದಿಗೆ ಕನ್ನಡ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಕನ್ನಡಾಂಬೆ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ನಾಡಿನ ಜನತೆಯ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಲಾಯಿತು.

ಗಡಿನಾಡಿನ ಭಾಗದಲ್ಲಿಯೂ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಜನರು ಹೊಂದಿರುವ ಅಭಿಮಾನ ಮತ್ತು ಯುವಜನತೆಯ ಕನ್ನಡ ಪ್ರೇಮ ಕಂಡು ಸಂತಸವಾಗಿದೆ ಎಂದು ಚೇತನ್ ಬಾಬು ತಿಳಿಸಿದರು.ಇದೇ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಆತ್ಮೀಯವಾಗಿ ಬೆರೆತು ಗ್ರಾಮದ ಮೂಲಭೂತ ಸೌಕರ್ಯಗಳು, ಅಭಿವೃದ್ಧಿ ಕಾರ್ಯಗಳು ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸಿ ಅಹವಾಲುಗಳನ್ನು ಆಲಿಸಿದರು. ಮಕ್ಕಳೊಂದಿಗೆ ಸಂವಾದ ನಡೆಸಿ ಅವರ ಶಿಕ್ಷಣ, ಸಮಸ್ಯೆಗಳು ಹಾಗೂ ಭವಿಷ್ಯದ ಗುರಿಗಳ ಕುರಿತು ಮಾಹಿತಿ ಪಡೆದರು.

ಗ್ರಾಮಗಳ ಅಭಿವೃದ್ಧಿಯೇ ನಾಡಿನ ಅಭಿವೃದ್ಧಿ. ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ, ಯುವಕರಿಗೆ ಸೂಕ್ತ ಅವಕಾಶಗಳು ಹಾಗೂ ಪ್ರತಿಯೊಂದು ಗ್ರಾಮಕ್ಕೂ ಅಗತ್ಯ ಮೂಲಸೌಕರ್ಯ ದೊರೆಯಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರ ಆಶೋತ್ತರಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಸದಾ ಜನರೊಂದಿಗೆ ಇರುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮ ಆಯೋಜಿಸಿದ ಈರಣ್ಣ ಹಾಗೂ ಯುವಕರಾದ ರಂಗೇಗೌಡ, ಕಿರಣ್, ಮಂಜುನಾಥ್ ಸೇರಿದಂತೆ ಸಮಸ್ತ ಗ್ರಾಮಸ್ಥರಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ಸಲ್ಲಿಸಿದರು.

Exit mobile version