ಬೆಂಗಳೂರು, ನ.27: ಕರ್ನಾಟಕ ಲೇಖಕಿಯರ ಸಂಘ ಪ್ರತಿವರ್ಷ ನೀಡುವ 2026ನೇ ಸಾಲಿನ ‘ಎಚ್.ಎಸ್. ಪಾರ್ವತಿ ದತ್ತಿ ಪ್ರಶಸ್ತಿ’ಗೆ ಬಹುಭಾಷಾ ಲೇಖಕಿ, ಸ್ತ್ರೀವಾದಿ ಸಾಹಿತ್ಯದ ಪ್ರತಿಪಾದಕಿ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕಿ ಡಾ. ಅನಸೂಯಾ ಕಾಂಬಳೆ ಭಾಜನರಾಗಿದ್ದಾರೆ. ಬೆಂಗಳೂರಿನ ಎನ್.ಆರ್. ಕಾಲೋನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಕೆ.ಆರ್. ಸಂಧ್ಯಾರೆಡ್ಡಿ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದ ವಿಮರ್ಶಕಿ ಎಂ.ಎಸ್. ಆಶಾದೇವಿ, ಕಳೆದ ಎರಡು ದಶಕಗಳಿಂದ ಚಿಂತಕಿ, ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಅನಸೂಯಾ ಕಾಂಬಳೆ ದಲಿತ ಮಹಿಳೆಯ ಬದುಕು, ಕುಟುಂಬ ಮತ್ತು ಸಾಮಾಜಿಕ ಶೋಷಣೆಯನ್ನು ತಮ್ಮ ಬರಹಗಳ ಕೇಂದ್ರವಾಗಿಸಿಕೊಂಡಿದ್ದಾರೆ. ‘ದಲಿತ ಮಹಿಳೆ ಮತ್ತು ಕುಟುಂಬ’ ಅವರ ಪ್ರಮುಖ ಸಂಶೋಧನಾ ಕೃತಿಯಾಗಿದ್ದು, ‘ಮತ್ಸ್ಯಗಂಧಿಯ ಹಾಡು’ ಕವನ ಸಂಕಲನವಾಗಿದೆ. ಅಂಚಿನ ಸಮುದಾಯದ ಅನುಭವಗಳ ಮೂಲಕ ಅಂಬೇಡ್ಕರ್ ಚಿಂತನೆಗಳನ್ನು ಅರ್ಥೈಸಿಕೊಂಡಿರುವ ಅಪರೂಪದ ಹೋರಾಟಗಾರ್ತಿ ಪ್ರಾಧ್ಯಾಪಕಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅನಸೂಯಾ ಕಾಂಬಳೆ, ಶೋಷಿತ ಸಮುದಾಯಗಳ ಬದುಕಿನ ಕುರಿತು ಬರೆಯುತ್ತಿದ್ದರೂ ಅವರ ಜೀವನದಲ್ಲಿ ನಿರೀಕ್ಷಿತ ಬದಲಾವಣೆ ಕಾಣುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದರು. ಪ್ರಶಸ್ತಿಗಳು ತಮ್ಮ ಬರಹಗಳನ್ನು ಹೆಚ್ಚಿನ ಓದುಗರಿಗೆ ತಲುಪಿಸಲು ನೆರವಾಗುತ್ತವೆ ಎಂಬ ಕಾರಣಕ್ಕೆ ಅವುಗಳನ್ನು ಸ್ವೀಕರಿಸುವುದಾಗಿ ತಿಳಿಸಿದರು. ತಂದೆ ಶಿಕ್ಷಕರಾಗಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ರೇಡಿಯೋ ಆಲಿಸುವ ಅಭ್ಯಾಸ ಬೆಳೆದಿದ್ದು, ಎಚ್.ಎಸ್. ಪಾರ್ವತಿ ಸೇರಿದಂತೆ ಆಕಾಶವಾಣಿಯ ಹಲವು ಧ್ವನಿಗಳು ತಮ್ಮ ಸಾಹಿತ್ಯಿಕ ಅಭಿರುಚಿ ರೂಪಿಸುವಲ್ಲಿ ಪ್ರಭಾವ ಬೀರಿವೆ ಎಂದರು
2004ರಲ್ಲಿ ಬಿಸಿಯೂಟ ನೌಕರರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದುದನ್ನು ಸ್ಮರಿಸಿದ ಅವರು, ಪ್ರಸ್ತುತ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಯಾವುದೇ ನಿಶ್ಚಿತ ಆದಾಯವಿಲ್ಲದೆ ದುಡಿಯುವ ಕೂಲಿ ಕಾರ್ಮಿಕ ಮಹಿಳೆಯರ ಸಂಕಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇಂತಹ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಸಂಕೋಚ ಮೂಡಿಸಿದೆ ಎಂದರು.
ಪ್ರಶಸ್ತಿಯು ₹10,000 ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಎಚ್.ಎಸ್. ಪಾರ್ವತಿ ಅವರು ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಅವರ ಹೆಸರಿನಲ್ಲಿ ಈ ದತ್ತಿ ಸ್ಥಾಪಿಸಲಾಗಿದೆ ಎಂದು ಆರ್. ಸುನಂದಮ್ಮ ತಿಳಿಸಿದರು.ಕಾರ್ಯಕ್ರಮದಲ್ಲಿ ಪ್ರೊ. ಬಿ.ಎನ್. ಸುಮಿತ್ರಾಬಾಯಿ, ಡಾ. ವಿಜಯಾ, ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಭೈರಮಂಗಲ ರಾಮೇಗೌಡ, ಪ್ರೊ. ಎಂ.ಎಸ್. ಸಂಧ್ಯಾ ಉಪಸ್ಥಿತರಿದ್ದರು. ರೇಣುಕಾ ಕೋಡಗಂಟಿ ನಿರೂಪಿಸಿದರು.

