Site icon NBTV Kannada

ಪುಸ್ತಕ ಓದಿನಿಂದ ಬೌದ್ಧಿಕ ಪ್ರಬುದ್ಧತೆ ಬೆಳವಣಿಗೆ

ಬೀದರ್‌: ಪುಸ್ತಕಗಳ ಓದಿನಿಂದ ಬೌದ್ಧಿಕ ಪ್ರಬುದ್ಧತೆ ಬೆಳೆಯುತ್ತದೆ. ನಮ್ಮ ಜಿಲ್ಲೆಯ ಲೇಖಕರಿಂದ ಗಟ್ಟಿ ಸಾಹಿತ್ಯ ಹೊರಬರಬೇಕಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಅಭಿಪ್ರಾಯಪಟ್ಟರು.

ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಜಾಗೃತ ಸಮಿತಿ ಬೀದರ್ ಹಾಗೂ ಜನಪರ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ‌ ಬೀದರ್‌ ನಗರದ ಕುಂಬಾರವಾಡ ಬಡಾವಣೆಯಲ್ಲಿ ಸಾಹಿತಿ, ಶಿಕ್ಷಕ ಸಂಜೀವಕುಮಾರ ಅತಿವಾಳೆ ಅವರ ನಿವಾಸದಲ್ಲಿ ಶುಕ್ರವಾರ ಆಯೋಜಿಸಿದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಭಾಗದಲ್ಲಿ ಅನೇಕ ಪ್ರತಿಭಾನ್ವಿತ ಲೇಖಕರಿದ್ದರೂ ಸಹ ಅವರ ಸಾಹಿತ್ಯ ರಾಜ್ಯಮಟ್ಟದಲ್ಲಿ ಗುರುತಿಸುವ ಕೆಲಸ ಆಗುತ್ತಿಲ್ಲ. ಬರಹಗಾರರು ಹೆಚ್ಚು ಅಧ್ಯಯನದಲ್ಲಿ ತೊಡಗಿ ಗಟ್ಟಿ ಸಾಹಿತ್ಯ ಹೊರತರಲು ಮುಂದಾಗಬೇಕು ಎಂದು ಹೇಳಿದರು.

ಪತ್ರಕರ್ತ ರಾಜೇಶ್ ಸಿಂಧೆ ವಿಶೇಷ ಉಪನ್ಯಾಸ ನೀಡಿ,’ಆಧುನಿಕ ತಂತ್ರಜ್ಞಾನ ಬೆಳೆದಂತೆ ಪುಸ್ತಕ ಓದುವ ಸಂಸ್ಕೃತಿ ಕುಗ್ಗುತ್ತಿರುವ ಈ ಕಾಲದಲ್ಲಿ ತಂತ್ರಜ್ಞಾನ ಸದ್ಭಳಕೆ ಮಾಡಿಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ವಿಶೇಷವಾಗಿ ಯುವ ಸಮೂಹ ಪುಸ್ತಕ ಓದುವ ಅಭಿರುಚಿ ಮೈಗೂಡಿಸಿಕೊಂಡರೆ ಮಾನವೀಯ ಮೌಲ್ಯಗಳು ಬೆಳೆಯಲು ಸಾಧ್ಯ. ಮೌಲ್ಯಯುತ ಕೃತಿಗಳು ಹಲವು ಚಳವಳಿಗಳಿಗೆ ಸ್ಫೂರ್ತಿದಾಯಕವಾಗಿವೆ” ಎಂದು ಹೇಳಿದರು.

ಸಾಹಿತಿ ನಾಗಶೆಟ್ಟಿ ಪಾಟೀಲ್ ಗಾದಗಿ ಮಾತನಾಡಿ, “ಆಧುನಿಕ ತಂತ್ರಜ್ಞಾನದಲ್ಲಿ ಪುಸ್ತಕ ಓದು ಅಗತ್ಯವಿದೆ. ದಿನದಲ್ಲಿ ಒಂದಿಷ್ಟು ಸಮಯ ಓದಿಗೆ ಮೀಸಲಿಡಬೇಕು. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಉತ್ತಮ ಮಾರ್ಗದರ್ಶಕ. ಪುಸ್ತಕ ಜ್ಞಾನ ಅಂತರಂಗದಲ್ಲಿ ಬೆಳಗಬೇಕು. ಪುಸ್ತಕ ಮನಸ್ಸು ಬೆಳಗುತ್ತದೆ. ಪುಸ್ತಕ ಸಂಸ್ಕೃತಿ ಸಮಾಜದಲ್ಲಿ ಇನ್ನಷ್ಟು ಬೆಳವಣಿಗೆಗೆ ಶ್ರಮಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಂಜೀವಕುಮಾರ ಅತಿವಾಳೆ ಮಾತನಾಡಿ, ‘ಬೀದರ್ ಜಿಲ್ಲೆಯಲ್ಲಿರುವ ಪ್ರತಿಭಾನ್ವಿತ ಸಾಹಿತಿ, ಲೇಖಕರನ್ನು ಗುರುತಿಸುವ ಕೆಲಸ ಹೆಚ್ಚಾಗಿನಡೆಯಬೇಕಿದೆ. ಕಾವ್ಯ, ಕಥೆ ಕಮ್ಮಟಗಳ ಮುಖಾಂತರ ಹೊಸ ತಲೆಮಾರಿನ ಯುವಕರನ್ನು ಬರವಣಿಗೆಗೆ ಸಜ್ಜುಗೊಳಿಸುವುದು ಅಗತ್ಯವಿದೆ. ಉತ್ತಮ ಓದುಗರಿಂದ ಮಾತ್ರ ಮೌಲ್ಯಯುತ ಪುಸ್ತಕಗಳು ಹೊರಬರಲು ಸಾಧ್ಯವಿದೆ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಮುಹಮ್ಮದ್ ನಿಜಾಮುದ್ದೀನ್ ಮಾತನಾಡಿ, “ಓದಿನ ಹವ್ಯಾಸವು ಮನಸ್ಸಿನ ಏಕಾಗ್ರತೆ, ನೆಮ್ಮದಿ, ಜ್ಞಾನ ವೃದ್ಧಿಸುತ್ತದೆ. ಎಲ್ಲೆಡೆ ಮನೆಗೊಂದು ಪುಸ್ತಕಾಲಯ ಆಗಬೇಕು. ಉತ್ತಮ ವ್ಯಕ್ತಿತ್ವ ವಿಕಸನಕ್ಕೆ ನಿರಂತರ ಅಧ್ಯಯನ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಬಾಲಾಜಿ ಕುಂಬಾರ ಪ್ರಾಸ್ತಾವಿಕ ಮಾತನಾಡಿ, “ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರಿದ್ದಂತೆ. ಎಲ್ಲರ ಮನೆಯಲ್ಲಿ ದೇವರ ಕೋಣೆ ಇರುವಂತೆ ಮನೆಯಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಜಾಗ ಮೀಸಲಿಡಬೇಕು. ಪ್ರತಿಯೊಬ್ಬರು ಓದಿನ ಅಭಿರುಚಿ ಬೆಳೆಸಿಕೊಂಡರೆ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಉಳಿಯುತ್ತವೆ. ಮನೆ-ಮನೆಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಹೆಚ್ಚಿಸುವುದು ಕನ್ನಡ ಪುಸ್ತಕ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗ್ರಂಥಾಲಯಗಳ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ” ಎಂದರು.

ಗಮನ ಸೆಳೆದ ಕವಿಗೋಷ್ಠಿ

ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಪ್ರಯುಕ್ತ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಕವಿಗಳಾದ ಜಗದೀಶ್ವರ ಬಿರಾದಾರ, ಅಶ್ವಜೀತ ದಂಡೀನ್, ಚನ್ನಬಸವ ಭೂರೆ, ತುಕಾರಾಮ ರಾಜನಾಳೆ, ಎಚ್.ಬಿ.ಪ್ರಿಯಾಂಕಾ, ಉಮಾಕಾಂತ ವಿಳಾಸಪುರೆ, ಸುಜಾತಾ ಹೊಸಮನಿ, ಅವಿನಾಶ ಸೋನೆ ಸ್ವರಚಿತ ಕವಿತೆ ವಾಚಿಸಿದರು.ಕಾರ್ಯಕ್ರಮದಲ್ಲಿ ಪ್ರಮುಖರಾದ ಶಂಭುಲಿಂಗ ವಾಲ್ದೊಡ್ಡಿ, ಆರ್.ಎಸ್.ಬಿರಾದರ, ನಿರಂಹಕಾರ ಬಂಡಿ, ಲಕ್ಷ್ಮಣ ಮೇತ್ರೆ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

Exit mobile version