Site icon NBTV Kannada

AECS ಲೇಔಟ್‌ನಲ್ಲಿ ಅಕ್ರಮ ಕಟ್ಟಡ, ವಾಣಿಜ್ಯ ಚಟುವಟಿಕೆ: ಸ್ವತಂತ್ರ ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ. 85,ರ ದೊಡ್ಡನೆಕ್ಕುಂದಿಯ AECS ಲೇಔಟ್ ನ, ಕುಂದಲಹಳ್ಳಿಯಲ್ಲಿ ನಡೆಯುತ್ತಿದೆ ಎನ್ನಲಾದ ನಿಯಮಬಾಹಿರ ಕಟ್ಟಡ ನಿರ್ಮಾಣ ಹಾಗೂ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳ ಕುರಿತು ಸಮಗ್ರ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಯುವ ಸಮೂಹ ಸಂಘಟನೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಆಗಸ್ಟ್ 27, 2026ರಂದು ಸಲ್ಲಿಕೆಯಾದ ಈ ಮನವಿ ಪತ್ರವನ್ನು ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ರಾಜ್ಯಪಾಲರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಆಯುಕ್ತರು ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧ್ಯಕ್ಷರಿಗೆ ರವಾನಿಸಲಾಗಿದೆ. ಈ ಹಿಂದೆ ಇದೇ ವ್ಯಾಪ್ತಿಯಲ್ಲಿ ಗಣಪತಿ ದೇವಸ್ಥಾನದ ಗೋಪುರವನ್ನು ನಿಯಮಗಳಿಲ್ಲದೆ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಈ ಪ್ರಕರಣಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ.

ಮನವಿಯ ಪ್ರಮುಖ ಆರೋಪಗಳು

ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ ಸಂಘಟನೆಯ ಪ್ರಕಾರ, AECS ಲೇಔಟ್‌ನ ವಸತಿ ವಲಯದಲ್ಲಿ ಹೋಟೆಲ್, ಪೇಯಿಂಗ್ ಗೆಸ್ಟ್ (PG), ಕೋ-ಲಿವಿಂಗ್ ಮತ್ತು ಏರ್‌ಬಿಎನ್‌ಬಿ ಮಾದರಿಯ ವಾಣಿಜ್ಯ ಚಟುವಟಿಕೆಗಳು ಅನುಮತಿ ಇಲ್ಲದೆ ನಡೆಯುತ್ತಿವೆ. ಇದಲ್ಲದೆ ಕಟ್ಟಡ ಯೋಜನೆ ಮತ್ತು ವಾಸ್ತವ ನಿರ್ಮಾಣದ ನಡುವೆ ಭಾರಿ ವ್ಯತ್ಯಾಸ, ಭೂ ಬಳಕೆ (Land Use), FAR/FSI, ಸೆಟ್‌ಬ್ಯಾಕ್ ಮತ್ತು ಪಾರ್ಕಿಂಗ್ ನಿಯಮಗಳ ಉಲ್ಲಂಘನೆಯ ಆರೋಪಗಳಿವೆ

.ಮನವಿಯಲ್ಲಿ ಪ್ರಸ್ತಾಪಿಸಲಾದ ಇತರ ಪ್ರಮುಖ ಅಂಶಗಳು:

ವಾಣಿಜ್ಯ/ಹೋಟೆಲ್ ಬಳಕೆಗೆ ಅಗತ್ಯವಿರುವ BESCOM 11 KV ವಿದ್ಯುತ್ ಸಂಪರ್ಕ ಮತ್ತು ಲೋಡ್ ಅನುಮತಿಗಳ ಸಿಂಧುತ್ವ.
BWSSB/ಕಾವೇರಿ ನೀರು ಹಾಗೂ ಒಳಚರಂಡಿ ಸಂಪರ್ಕಗಳನ್ನು ಸಕ್ರಮ ಅನುಮೋದನೆ ಇಲ್ಲದೆ ಪಡೆಯಲಾಗಿದೆ ಎಂಬ ಆರೋಪ.
ಅಲ್ಲದೇ ಲೇಔಟ್ ವ್ಯಾಪ್ತಿಯಲ್ಲಿ ಅಂದಾಜು 1,500 ರಿಂದ 1,800ರವರೆಗೆ ಅನಧಿಕೃತ ಬೋರ್‌ವೆಲ್‌ಗಳ ಕೊರೆತ ಹಾಗೂ ಅತಿಯಾದ ಅಂತರ್ಜಲ ಬಳಕೆ ಹಾನಿಕಾರಕ ವಿಷಯಗಳನ್ನು ಪ್ರಮುಖವಾಗಿ ಸೇರಿಸಲಾಗಿದೆ.

ರಸ್ತೆ, ಫುಟ್‌ಪಾತ್, ಚರಂಡಿ ಮತ್ತು ಸಾರ್ವಜನಿಕ ಜಾಗದ ಒತ್ತುವರಿ.

ಸ್ಥಳೀಯ ಅಧಿಕಾರಿಗಳಾದ ಕಾರ್ಯಪಾಲಕ ಅಭಿಯಂತರ ರವಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಶಿಖಂತ ಹಾಗೂ ಸಹಾಯಕ ಅಭಿಯಂತರ ಸಂತೋಷ್ ಅವರ ಕರ್ತವ್ಯ ನಿರ್ವಹಣೆ ಮತ್ತು ಮೇಲ್ವಿಚಾರಣೆ ಕುರಿತ ಪ್ರಶ್ನೆಗಳು, ಜೊತೆಗೆ ಲಂಚ/ಅಧಿಕಾರ ದುರುಪಯೋಗದ ಆರೋಪಗಳ ಸ್ವತಂತ್ರ ಪರಿಶೀಲನೆಯ ಬೇಡಿಕೆ. ಸಂಘಟನೆ ಸ್ಪಷ್ಟಪಡಿಸಿರುವಂತೆ, ಆರೋಪಗಳ ಸಾಬೀತಿಗೆ ಮುನ್ನ ಯಾವುದೇ ವ್ಯಕ್ತಿ ಅಥವಾ ಅಧಿಕಾರಿಯನ್ನು ತಪ್ಪಿತಸ್ಥರೆಂದು ಪರಿಗಣಿಸಬಾರದು ಮತ್ತು ದಾಖಲೆಗಳು, ಸಾಕ್ಷ್ಯಗಳ ಆಧಾರದ ಮೇಲಷ್ಟೇ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಿ ಹೇಳಲಾಗಿದೆ.

15 ಅಂಶಗಳ ಬೇಡಿಕೆ

ಮನವಿ ಪತ್ರದಲ್ಲಿ ಸಂಘಟನೆ 15 ಅಂಶಗಳ ಬೇಡಿಕೆ ಪಟ್ಟಿ ಸಲ್ಲಿಸಿದ್ದು, ಇವುಗಳಲ್ಲಿ ವಿಶೇಷ ಕಟ್ಟಡ ಪರಿಶೀಲನಾ ಅಭಿಯಾನ, ಕಟ್ಟಡ ಯೋಜನೆ-ವಾಸ್ತವ ನಿರ್ಮಾಣ ಹೋಲಿಕೆ, ಭೂ ಬಳಕೆ ಉಲ್ಲಂಘನೆ ಪರಿಶೀಲನೆ, BESCOM ಹಾಗೂ BWSSB ದಾಖಲೆಗಳ ತಪಾಸಣೆ, ಬೋರ್‌ವೆಲ್ ಸಂಖ್ಯೆಗಳ ವಿಶೇಷ ಪರಿಶೀಲನೆ, ಸಂಬಂಧಪಟ್ಟ ಅಧಿಕಾರಿಗಳ ಹೊಣೆಗಾರಿಕೆ ನಿಗದಿ, ಸ್ವತಂತ್ರ ತನಿಖಾ ತಂಡ ರಚನೆ, ಕಾಲಮಿತಿಯೊಳಗೆ ಕ್ರಮ ಹಾಗೂ ಅಂತಿಮವಾಗಿ ಕೈಗೊಂಡ ಕ್ರಮದ ವರದಿ (Action Taken Report) ದೂರುದಾರರಿಗೆ ನೀಡುವಂತೆ ಕೋರಲಾಗಿದೆ.

ಅಕ್ರಮಗಳಿಗೆ ಭ್ರಷ್ಟಾಚಾರ ಮತ್ತು ರಾಜಕೀಯ ಬೆಂಬಲ ಕಾರಣ

ಸರ್ಕಾರಕ್ಕೆ ದೂರಲಾದ ಮನವಿ ಪತ್ರದಲ್ಲಿನ ಅಕ್ರಮ ಚಟುವಟಿಕೆಗಳಿಗೆ ಮೂಲ ಕಾರಣ ಕೆ.ಆರ್.ಪುರಂ ಜಿ.ಬಿ.ಎ ಮುಖ್ಯ ಅಭಿಯಂತರರಾದ ಲೋಕೇಶ್‌ ಎಂದು ಸ್ಥಳೀಯರ ವಾದವಾಗಿದ್ದು. ತಾನೂ ಈ ಅಕ್ರಮಗಳಿಗೆ ಭ್ರಷ್ಟಚಾರದಲ್ಲಿ ಭಾಗವಾಗಿರ ಬೇಕು ಆದರಿಂದಲೇ ಈ ಸಮಸ್ಯೆಗಳು ತಲೆ ಎತ್ತಿವೇ , ಇನ್ನೂ ಸ್ವತಹ ಈ ಅಧಿಕಾರಿಗೆ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ನವರ ರಾಜಕೀಯ ಬೆಂಬಲವು ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಶ್ರೀರಕ್ಷೆಯಾಗಿದೆ ಎಂಬುದು ಸಾರ್ವಜನಿಕ ವಲದಲ್ಲಿ ಕೇಳಿಬರುತ್ತಿರುವ ಆರೋಪವಾಗಿದೆ.

ಮನವಿ ಪತ್ರದಲ್ಲಿ ಸಾರ್ವಜನಿಕ ಹಿತದ ದೃಷ್ಟಿಯಿಂದ ವಸತಿ ಪ್ರದೇಶದ ನಗರ ಯೋಜನಾ ನಿಯಮಗಳ ಸಮಗ್ರ ಪಾಲನೆಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ದೂರುದಾರರು ಸಂವಿಧಾನಾತ್ಮಕ ಹಾಗೂ ಕಾನೂನುಬದ್ಧ ಪರಿಹಾರಗಳಿಗಾಗಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗುವ ಎಚ್ಚರಿಕೆಯನ್ನೂ ಪತ್ರದಲ್ಲಿ ನೀಡಲಾಗಿದ್ದು.ಮನವಿಗೆ ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ ಡಾ. ಎಸ್. ಸಂಗಮೇಶ್ ಅವರು ಸಹಿ ಹಾಕಿದ್ದು, ಪ್ರದೇಶದ ವಿವಿಧ ಸ್ಥಳಗಳ ಛಾಯಾಚಿತ್ರಗಳು ಹಾಗೂ ಪೂರಕ ದಾಖಲೆಗಳನ್ನು ಲಗತ್ತಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ

Exit mobile version