ಬೆಂಗಳೂರು, ಆ.25: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಂಜೂರಾದ ಭೂಮಿಯನ್ನು ರಕ್ಷಿಸುವ ಉದ್ದೇಶದ PTCL ಕಾಯ್ದೆ, 1978ರ ಪರಿಣಾಮಕಾರಿ ಅನುಷ್ಠಾನದಲ್ಲಿ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ವಿಫಲವಾಗಿವೆ ಎಂದು ಸಾರ್ವಜನಿಕ ವಿಚಾರಣೆಯ ಆಧಾರದ ಮೇಲೆ ಸಿದ್ಧಪಡಿಸಿರುವ ಜ್ಯೂರಿ ವರದಿ ಆರೋಪಿಸಿದೆ.
PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ, ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (AILAJ), ಆಲ್ಟರ್ನೇಟಿವ್ ಲಾ ಫೋರಂ (ALF) ಹಾಗೂ ಮಂಥನ್ ಲಾ ವತಿಯಿಂದ ಲೆಜಿಸ್ಲೇಟರ್ಸ್ ಹೋಮ್‌ನಲ್ಲಿ ಮಂಗಳವಾರ ಜ್ಯೂರಿ ವರದಿ ಬಿಡುಗಡೆ ಮಾಡಲಾಯಿತು. ಸಚಿವರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ವಕೀಲರು ಹಾಗೂ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿಯಲ್ಲಿ ಹತ್ತು ಪ್ರಕರಣಗಳ ಅಧ್ಯಯನದ ಮೂಲಕ ಶಿಕ್ಷಣದ ಕೊರತೆ, ಸಾಲಬಾಧೆ, ವಂಚನೆ, ಜೀತ ಪದ್ಧತಿ, ಜಾತಿ ವ್ಯವಸ್ಥೆ, ಬೆದರಿಕೆ ಮತ್ತು ಹಿಂಸಾಚಾರಗಳಿಂದ ಮಂಜೂರುದಾರರು ತಮ್ಮ ಭೂಮಿಯನ್ನು ಕಳೆದುಕೊಂಡಿರುವುದನ್ನು ವಿವರಿಸಲಾಗಿದೆ. ಅಕ್ರಮವಾಗಿ ಭೂಮಿ ವರ್ಗಾವಣೆಯಾದ ಬಳಿಕ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯಿಂದ ಸೂಕ್ತ ಪರಿಹಾರ ದೊರೆಯದಿರುವುದರಿಂದ ಮೂಲ ಭೂಸುಧಾರಣೆಯ ಉದ್ದೇಶವೇ ಹಿಮ್ಮುಖವಾಗುತ್ತಿದೆ ಎಂದು ವರದಿ ಹೇಳಿದೆ.
ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ವರದಿಯ ಶಿಫಾರಸುಗಳ ಅನುಷ್ಠಾನಕ್ಕಾಗಿ ಕಂದಾಯ ಸಚಿವರೊಂದಿಗೆ ತಕ್ಷಣ ಸಭೆ ನಡೆಸಬೇಕು ಹಾಗೂ PTCL ಪ್ರಕರಣಗಳಿಗೆ ವಿಶೇಷ ನ್ಯಾಯಾಲಯ ಮತ್ತು ನ್ಯಾಯಮಂಡಳಿಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ದಲಿತರು ಮತ್ತು ಆದಿವಾಸಿಗಳ ಭೂಹಕ್ಕಿನ ಪ್ರಶ್ನೆ ಅತ್ಯಂತ ಮಹತ್ವದ್ದಾಗಿದ್ದು, ಈ ಹೋರಾಟಕ್ಕೆ ತಮ್ಮ ಬೆಂಬಲ ಮುಂದುವರಿಸುವುದಾಗಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಅವರು PTCL ಕಾಯ್ದೆ ಜಾರಿಯಲ್ಲಿ ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಿದರು.
ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ Nekkanti Rama Lakshmi review petitionನಲ್ಲಿ ರಾಜ್ಯ ಸರ್ಕಾರ ಪರಿಣಾಮಕಾರಿಯಾಗಿ ವಾದಿಸಬೇಕು, PTCL ಅನುಷ್ಠಾನ ಪರಿಶೀಲಿಸಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಬೇಕು, Nekkanti ತೀರ್ಪಿನ ನಂತರ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಪರ್ಯಾಯ ಭೂಮಿ ನೀಡಬೇಕು ಹಾಗೂ ಫಲಾನುಭವಿಗಳಿಗೆ ಉಚಿತ ಕಾನೂನು ನೆರವು ಒದಗಿಸಬೇಕು ಎಂಬುದು ವರದಿಯ ಪ್ರಮುಖ ಶಿಫಾರಸುಗಳಾಗಿವೆ.
ಅಕ್ರಮ ಭೂ ವರ್ಗಾವಣೆಯನ್ನು ತಡೆಯಲು ನೋಂದಣಿ ಹಂತದಲ್ಲೇ ಕ್ರಮ ಕೈಗೊಳ್ಳಬೇಕು ಮತ್ತು ಸಂಬಂಧಿಸಿದ ಕಂದಾಯ ಅಧಿಕಾರಿಗಳಿಗೆ PTCL ಕಾಯ್ದೆ ಕುರಿತು ವಿಶೇಷ ತರಬೇತಿ ನೀಡಬೇಕು ಎಂದು ವರದಿ ಒತ್ತಾಯಿಸಿದೆ.


