
ಬೆಳಗಾವಿ: ಜಿಲ್ಲೆ ವ್ಯಾಪ್ತಿಯಲ್ಲಿ ಭೂಸ್ವಾಧೀನ ಮತ್ತು ಸಮೀಕ್ಷೆ ಕಾರ್ಯಗಳು ಪೂರ್ಣಗೊಳ್ಳದ ಕಾರಣ ಬೆಳಗಾವಿ – ಧಾರವಾಡ ರೈಲು ಮಾರ್ಗದ ಕಾಮಗಾರಿ ಕೆಲಸಗಳಲ್ಲಿ ವಿಳಂಬವಾಗುತ್ತಿದೆ. ಮಾರ್ಚ್ ಅಂತ್ಯದೊಳಗೆ ಭೂಸ್ವಾಧೀನ ಕಾರ್ಯ ಪೂರ್ಣಗೊಳಿಸಬೇಕು ಎಂಬುದಾಗಿ ಸಂಸದ ಜಗದೀಶ ಶೆಟ್ಟರ್ ರವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ( ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ) ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ ಏಪ್ರಿಲ್ ಮೊದಲ ವಾರದಲ್ಲೇ ಕಾಮಗಾರಿ ಆರಂಭಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು’, ಎಂದು ತಿಳಿಸಿದ್ದು.”ಹಲಗಾ-ಮಚ್ಛೆ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಿಸುವ ವಿಚಾರದಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಬಾಕಿ ಇರುವ ಕಡೆ ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಬೇಕು,” ಎಂದು ಸೂಚಿಸಿದರು. ತದನಂತರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ರವರು ಮಾತನಾಡುತ್ತಾ. ‘ಖಾನಾಪುರ ತಾಲೂಕಿನ ಕುಸುಮಳ್ಳಿ ಬಳಿ ರೈಲ್ವೆ ಮೇಲ್ಸ್ತುವೆ ಕಾಮಗಾರಿ ಪ್ರಾರಂಭಿಸಲಾಗಿದೆ ‘ ಎಂದು ಮಾಹಿತಿ ನೀಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಳಗಾವಿ ವಿಶೇಷ ಭೂಸ್ವಾಧೀನಾಧಿಕಾರಿ ಬಲರಾಮ ಚವ್ಹಾಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬಾಗಲಕೋಟೆ ವಿಶೇಷ ಭೂಸ್ವಾಧೀನಾಧಿಕಾರಿ ರಾಜಶ್ರೀ ಜೈನಾಪುರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

