ತುಮಕೂರು : ನಗರದ ಡಾ ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಕಛೇರಿಯಲ್ಲಿ ಇಂದು ಮುಸ್ಲಿಂ ಬಾಂಧವರ ಅಕ್ಷರದ ಅವ್ವ ಎಂದೇ ಖ್ಯಾತಿಗಳಿಸಿರುವ ಫಾತಿಮಾ ಶೇಕ್‌ರವರ ಜನ್ಮದಿನಾಚರಣೆಯನ್ನು ಪುಷ್ಪನಮನ ಸಲ್ಲಿಸಿರುವುದರ ಮೂಲಕ ಆಚರಿಸಲಾಗಿದ್ದು.
ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮರ್ ರವರು ಮಹಾರಾಷ್ಟದ ಪುಣೆಯಲ್ಲಿ ೧೮೩೧ರ ಜನವರಿ ೦೯ ರಂದು ಜನಿಸಿದ ಫಾತಿಮಾ ಶೇಕ್ ರವರು ಸಂಪ್ರದಾಯ ಮುಸ್ಲಿಮರಿಂದ ಎದುರಾದ ವಿರೋಧಗಳನ್ನು ದಿಟ್ಟತನದಿಂದ ಎದುರಿಸಿ, ತನ್ನ ಅಣ್ಣನಾದ ಉಸ್ಮಾನ್ ಶೇಕ್ ಅವರ ನೆರವಿನಿಂದ ಅಕ್ಷರ ಕಲಿತು ಭಾರತದ ಮುಸ್ಲಿಂ ಸಮುದಾಯದ ಮೊದಲ ಮಹಿಳಾ ಶಿಕ್ಷಕಿಯಾಗಿ ಗುರುತಿಸಿಕೊಂಡಂತಹ ಧೀಮಂತ ಮಹಿಳೆಯ ಜನ್ಮದಿನಾಚರಣೆಯನ್ನು ಇಂದು ನಾವು ಆಚರಿಸುತ್ತಿದ್ದೇವೆ.
ಫಾತಿಮಾ ಶೇಕ್ ಅವರು ಜ್ಯೋತಿಬಾ ಫುಲೆಯವರಿಗೆ ಗೆಳೆಯನಾಗಿದ್ದ ಉಸ್ಮಾನ್ ಶೇಕ್ ಅವರ ತಂಗಿಯಾಗಿದ್ದು, ಫುಲೆ ದಂಪತಿಗಳು ೧೮೪೮ರಲ್ಲಿ ಇದೇ ಉಸ್ಮಾನ್ ಶೇಕ್ ಅವರ ಮನೆಯಲ್ಲಿ ಶಾಲೆಯೊಂದನ್ನು ಆರಂಭಿಸಿ ಅಲ್ಲಿಯೇ ಮೊದಲ ಪಾಠಶಾಲೆಯನ್ನು ಪ್ರಾರಂಭಿಸುತ್ತಾರೆ, ಅಂದಿನ ಕಾಲದಲ್ಲಿ ಮನುವಾದಿ ಮೇಲ್ಜಾತಿಗಳು, ಹಿಂದುಗಳು, ಅತ್ತ ಮತೀಯವಾದಿ ಸಂಪ್ರದಾಯಸ್ಥ ಮುಸ್ಲಿಮರ ವಿರೋಧಗಳ ನಡುವೆಯೂ, ಮುಸ್ಲಿಮರ ಮತ್ತು ದಲಿತರಿಗೆ ಅಕ್ಷರದ ಬೆಳಕು ನೀಡಲು ಮುಂದಾಗಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲಿಸಲು ಮುಂದಾಗಿದ್ದರು ಜೊತೆಗೆ ತನ್ನದೇ ಮನೆಯಲ್ಲಿ ಫುಲೆ ದಂಪತಿಗಳಿಗೆ ಆಶ್ರಯ ನೀಡಿ ಶಾಲೆ ಪ್ರಾರಂಭಿಸಲು ನೆರವಾದ ಉಸ್ಮಾನ್ ಶೇಕ್ ತನ್ನ ತಂಗಿಯಾದ ಫಾತಿಮಾ ಶೇಕ್ ಅವರನ್ನು ಸಾವಿತ್ರಿಬಾಯಿ ಫುಲೆಯವರಿಗೆ ಪರಿಚಯ ಮಾಡಿಕೊಟ್ಟರು. ಅದೇ ಶಾಲೆಯಲ್ಲಿ ಫಾತಿಮಾ ಶೇಕ್ ಶಿಕ್ಷಕಿಯಾಗಿ ನೂರಾರು ಜನರಿಗೆ ವಿದ್ಯಾರ್ಜನೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು, ಇವರ ಹೆಸರು ಎಲ್ಲಿಯೂ ಅಷ್ಟಾಗಿ ಪ್ರಚಲಿತದಲ್ಲಿ ಕಂಡು ಬರದಿದ್ದರೂ, ಅವರು ಮಾಡಿದ ಈ ಪುಣ್ಯ ಕಾರ್ಯದಿಂದ ಜನಮನ್ನಣೆ ಪಡೆದು, ಇಂದಿಗೂ ಅಜರಾಮರಾಗಿದ್ದಾರೆ ಎಂದು ತಿಳಿಸಿದರು.
ನಂತರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶಬ್ಬೀರ್ ಅಹಮ್ಮದ್‌ರವರು ಮಾತನಾಡಿ ಫಾತಿಮಾ ಶೇಕ್ ಮತ್ತು ಸಾವಿತ್ರಿಬಾಯಿ ಫುಲೆ ಜೊತೆಗೂಡಿ ದುಡಿದು ಮುಸ್ಲಿಮರ ಹೆಣ್ಣುಮಕ್ಕಳಿಗೆ ಹಾಗೂ ದಲಿತರಿಗೆ ಅಕ್ಷರದ ಬೆಳಕು ನೀಡುವ ಮೂಲಕ ಇಂದು ಖ್ಯಾತಿಗಳಿಸಿದ್ದಾರೆ, ಇವರ ಅಂದಿನ ಪರಿಶ್ರಮದ ಫಲವಾಗಿಯೇ ನಮ್ಮ ಮುಸ್ಲಿಂ ಯುವತಿಯರು ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು, ಸಮಾಜಮುಖಿ ಜೀವನವನ್ನು ನಡೆಸಲು ಮುಂದಾಗಿರುವುದು ಎಂದರೇ ತಪ್ಪಾಗಲಾರದು. ಮೌಢ್ಯಾಚರಣೆಗಳು ಇದ್ದಂತಹ ಕಾಲಘಟ್ಟದಲ್ಲಿ ಫಾತೀಮಾ ಶೇಕ್‌ರವರು ಹಲವಾರು ಸವಾಲುಗಳನ್ನು ಎದುರಿಸಿ, ನೂರಾರು ಜನರಿಗೆ ಅಕ್ಷರದ ಅವ್ವಳಾಗಿ ವಿದ್ಯಾದಾನ ಮಾಡಿದ್ದಾರೆ, ಇವರು ಚಿರಸ್ಮರಣಿಯರು ಎಂದರಲ್ಲದೇ, ಸಾವಿತ್ರಿಭಾಯಿ ಫುಲೆ ಮತ್ತು ಫಾತಿಮಾ ಶೇಕ್ ಆಧುನಿಕ ಭಾರತದ ಮೊದಲ ಮಹಿಳಾ ಶಿಕ್ಷಕರು ಎಂದರೇ ತಪ್ಪಾಗಲಾರದು ಎಂದರು.
ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ರಾಮಚಂದ್ರ ಎಸ್, ಅಲ್ಪಸಂಖ್ಯಾತರ ಘಟಕದ ನಗರ ಅಧ್ಯಕ್ಷರಾದ ರಫೀಕ್ ಅಹಮ್ಮದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದರ್ಶನ್ ಬಿ.ಆರ್, ತಾಲ್ಲೂಕು ಗೌ|| ಅಧ್ಯಕ್ಷರಾದ ಗಂಗಾಧರ್ ಜಿ.ಆರ್., ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀ ನಾರಾಯಣ ಎಸ್, ಗೂಳೂರು ರಾಜಣ್ಣ, ರಾಮಚಂದ್ರಯ್ಯ, ನಗರ ಅಧ್ಯಕ್ಷರಾದ ಶ್ರೀನಿವಾಸ್ ದಿಬ್ಬೂರು, ಅಂಜಮ್, ಹನುಮನರಸಯ್ಯ, ನರಸಿಂಹಮೂರ್ತಿ ಕೆ (ಕೆಸ್ತೂರು), ಗೋವಿಂದರಾಜು ಕೆ, ರಂಗಸ್ವಾಮಯ್ಯ ಕೆ, ಶಿವಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

