ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರ ಪತ್ನಿ ವಾಣಿ ಶಿವರಾಂ, ಮಾಜಿ ಕಾರ್ಪೋರೇಟರ್ ರೂಪಾ ಲಿಂಗೇಶ್ ಸೇರಿದಂತೆ ಛಲವಾದಿ ಮಹಾಸಭಾ ಅನೇಕ ಮುಖಂಡರೋಡನೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇಂದು ನಗರದ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ ಹಾಗೂ ಬೇರೆ ಪಕ್ಷಕ್ಕೆ ಸೇರುವುದಕ್ಕಿಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೈಗೆ ಶಕ್ತಿ ತುಂಬಲು ಇಂದು ಹಲವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಕಾಂಗ್ರೆಸ್ ಪಕ್ಷ ಛಲವಾದಿ ಸಮಾಜದವರನ್ನು ಗುರುತಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಒಪ್ಪದೆ ಇಂದು ಅನೇಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಹಳಬರು, ಹೊಸಬರು ಎಂಬ ತಾರತಮ್ಯ ಇಲ್ಲದೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನೀವೆಲ್ಲರೂ ಇನ್ನು ಮುಂದೆ ಕಾಂಗ್ರೆಸ್‍ನ ಸಕ್ರಿಯ ನಾಯಕರಾಗಿದ್ದಿರಿ. ನೀವುಗಳು ನಿಮ್ಮ ಬ್ಲಾಕ್ ಮತ್ತು ಬೂತ್ ಮಟ್ಟದಲ್ಲಿ ಹೆಚ್ಚಿನ ಜನರನ್ನು ಆನ್‍ಲೈನ್ ಮೂಲಕ ಕಾಂಗ್ರೆಸ್ ಪಕ್ಷದ ಸದಸ್ಯರನ್ನಾಗಿ ಮಾಡಬೇಕು. ತಳಮಟ್ಟದಲ್ಲಿ ಸಂಘಟನೆ ಮಾಡಿ ಪಕ್ಷಕ್ಕೆ ಶಕ್ತಿ ತುಂಬಬೇಕು. ಪಕ್ಷಕ್ಕೆ ಸೇರುವುದಷ್ಟೇ ಮುಖ್ಯವಲ್ಲ. ಪ್ರತಿ ಹಳ್ಳಿಗಳಲ್ಲಿ ಸಂಘಟನೆ ಮಾಡಿ ಪಕ್ಷಕ್ಕೆ ಆಸ್ತಿಯಾಗಬೇಕು ಎಂದರು.
ಇನ್ನು ಕೆ. ಶಿವರಾಮ್ ಒಬ್ಬ ಉತ್ತಮ ಐಎಎಸ್ ಅಧಿಕಾರಿಯಾಗಿದ್ದರು. ಬಿಜೆಪಿಯಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದರು. ಚಾಮರಾಜನಗರದಿಂದ ಒಮ್ಮೆ ನನಗೆ ಕರೆ ಮಾಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಮ್ಮೆ ಭೇಟಿ ಮಾಡಿದ್ದರು. ಆಗ ಆರೋಗ್ಯ ಚೆನ್ನಾಗಿತ್ತು. ದೇವರ ಲೀಲೆಯನ್ನು ನಾವು ಪ್ರಶ್ನೆ ಮಾಡುವಂತಿಲ್ಲ. ಈಗ ಅವರ ಪತ್ನಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರ ರಾಜಕೀಯ ಭವಿಷ್ಯ ಉಜ್ವಲವಾಗಿ ಬೆಳಗಲಿ ಎಂದು ಹಾರೈಸಿದರು.
ಶಿವರಾಮ್ ಗುರಿಯನ್ನು ನಾನು ಸಾಧಿಸುವೆ
ಈ ವೇಳೆ ಕೆ. ಶಿವರಾಮ್ ಪತ್ನಿ ವಾಣಿ ಮಾತನಾಡಿ, ಕೆ. ಶಿವರಾಮ್ ಅವರು ಮೊದಲ ಬಾರಿಗೆ ಕನ್ನಡದಲ್ಲಿ ಐಎಎಸ್ ಪಾಸ್ ಮಾಡಿದ್ದರು. ಅಧಿಕಾರಿಯಾಗಿ ಜನಪರ ಕೆಲಸ ಮಾಡಿದ್ದರು. ಬಡತನ, ಶೋಷಣೆಯನ್ನು ಹೋಗಲಾಡಿಸಬೇಕು ಎಂಬ ನಿಟ್ಟಿನಲ್ಲಿ ಅವರು ಐಎಎಸ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಅಲ್ಲದೆ, ಇನ್ನೂ ದೊಡ್ದ ಹಂತಕ್ಕೆ ಹೋಗಬೇಕು. ಜನಸೇವೆಯನ್ನು ಮಾಡಬೇಕು ಎಂಬ ಕಾರಣಕ್ಕೆ ರಾಜಕೀಯಕ್ಕೆ ಬಂದರು. ಅವರ ಕನಸು, ಗುರಿ ಹಾಗೆಯೇ ಉಳಿದು ಹೋಗಿದೆ. ಅದನ್ನು ಈಡೇರಿಸುವ ಹಂತದಲ್ಲಿದ್ದಾಗಲೇ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ. ಹೀಗಾಗಿ ಅವರ ಗುರಿ ಹಾಗೂ ಧ್ಯೇಯವನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ,
ಆದರೆ ಕೆ. ಶಿವರಾಮ್ ಅರನ್ನು ಬಿಜೆಪಿಯವರು ದುಡಿಸಿಕೊಂಡರು, ಬಳಸಿಕೊಂಡರು. ದಲಿತ ಎಂದು ಯಾವ ಸ್ಥಾನಮಾನವನ್ನು ಕೊಡಲಿಲ್ಲ. ಅವರಿಗೆ ಸೂಕ್ತ ಗೌರವ ಕೊಡದೆ ಅವಮಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಯಾರಿಗೆ ಅನ್ಯಾಯ ಆಗಬಾರದು ಎಂದು ನಾನು ಬಯಸುತ್ತೇನೆ. ಶಿವರಾಂ ಅವರನ್ನು ಕಳೆದುಕೊಂಡ ದುಃಖದಲ್ಲಿ ಇದ್ದ ನಮಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮನೆಗೆ ಕರೆಸಿ ಅವರ ಧರ್ಮ ಪತ್ನಿ ಮೂಲಕ ಧೈರ್ಯ ತುಂಬಿದ್ದಾರೆ. ಆದರೆ ಬಿಜೆಪಿ ಮಾಡಿದ ಅನ್ಯಾಯಕ್ಕೆ ಜನ ನ್ಯಾಯ ಕೊಡಬೇಕು. ನಾನು ಮುಂದೆ ಕಾಂಗ್ರೆಸ್‌ನಲ್ಲಿ ಇರುತ್ತೇನೆ. ನೀವು ಶಿವರಾಮ್ ಸಾವಿಗೆ ನ್ಯಾಯ ಕೊಡಲೇ ಬೇಕು ಎಂದು ವಾಣಿ ಶಿವರಾಮ್ ಸಭಿಕರಲ್ಲಿ ಮನವಿ ಮಾಡಿದರು ಎಂದು ಹೇಳಿದರು.