Breaking
Wed. Oct 7th, 2026

ತುಮಕೂರು ಜಿಲ್ಲೆಯ 10 ತಾಲೂಕುಗಳ ಬರ ಪರಿಹಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹ

ಪ್ರತಿ ತಾಲ್ಲೂಕಿನಲ್ಲಿ ಎಕರೆಗೆ ₹25–30 ಸಾವಿರ ನೀಡುವಂತೆ ಮನವಿ.

ತುಮಕೂರು(ಸೆ.7): ಜಿಲ್ಲೆಯ 10 ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ಬರ ಪರಿಹಾರ ಹಾಗೂ ವಿದ್ಯುತ್‌ ಬಿಲ್‌ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ರಾಜ್ಯ ಸರ್ಕಾರದ ಮುಖ್ಯಸ್ಥರಿಗೆ ಸಲ್ಲಿಸಿರುವ ಮನವಿಯಲ್ಲಿ, ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ, ತುಮಕೂರು, ಶಿರಾ, ಚಿಕ್ಕನಾಯಕನಹಳ್ಳಿ, ತಿಪಟೂರು, ತುರವೇಕೆರೆ, ಕುಣಿಗಲ್‌ ಹಾಗೂ ಗುಬ್ಬಿ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಉಲ್ಲೇಖಿಸಲಾಗಿದೆ. ಬರದಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ರೈತನಿಗೆ ಪ್ರತಿ ಎಕರೆಗೆ ₹25,000ರಿಂದ ₹30,000ರವರೆಗೆ ಪರಿಹಾರ ನೀಡಬೇಕು ಹಾಗೂ ರೈತರ ವಿದ್ಯುತ್‌ ಬಿಲ್‌ಗಳನ್ನು ಮನ್ನಾ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಅಲ್ಲದೆ, ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಕೆರೆ-ಕಟ್ಟೆಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಹಲವು ಗ್ರಾಮಗಳಲ್ಲಿ ಕೊಳವೆಬಾವಿಗಳ ನೀರಿನ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಅಗತ್ಯ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸುತ್ತಾ.

ಮನವಿಯಲ್ಲಿ ಪಾವಗಡ ಸೇರಿದಂತೆ ವಿವಿಧ ತಾಲೂಕುಗಳಲ್ಲಿನ ಸರ್ಕಾರಿ ಜಮೀನು, ಗೋಮಾಳ ಹಾಗೂ ಭೂಮಿ ಸಂಬಂಧಿತ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆಯಲಾಗಿದೆ. ಸರ್ಕಾರಿ ಜಮೀನುಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಕಾನೂನುಬದ್ಧವಾಗಿ ಭೂಮಿ ಕಲ್ಪಿಸುವಂತೆ ಹಾಗೂ ಬಾಕಿ ಇರುವ ಸಮಸ್ಯೆಗಳನ್ನು ಅಧಿಕಾರಿಗಳು ತ್ವರಿತವಾಗಿ ಪರಿಹರಿಸುವಂತೆ ಒತ್ತಾಯಿಸಲಾಗಿದ್ದು.ರೈತರು ಹಾಗೂ ಗ್ರಾಮೀಣ ಜನರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಮನವಿದಾರರು ಆಗ್ರಹಿಸಿದ್ದಾರೆ.

Related Post

Leave a Reply

Your email address will not be published. Required fields are marked *