Site icon NBTV Kannada

ಸ್ವಯಂ ಕಲ್ಯಾಣಕ್ಕೀಳಿದ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು

ಕೋಚಿಂಗ್‌ ಹೆಸರಲ್ಲಿ ಕೋಟ್ಯಂತರ ಹಗರಣ | ಸರ್ಕಾರಿ ನಿಮಯಕ್ಕಿಲ್ಲ ಕಿಮ್ಮತ್ತು; ಅನಧಿಕೃತ ಟೆಂಡರ್‌ಗೆ ಬಡ ವಿದ್ಯಾರ್ಥಿಗಳ ಭವಿಷ್ಯ ಮಾರಾಟ

ಬೆಂಗಳೂರು: ತಳಸಮುದಾಗಳ ಸಮಗ್ರ ಕಲ್ಯಾಣದ ಉದ್ದೇಶ ಮತ್ತು ಗುರಿ ಹೊಂದಿರುವ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಸಿದವರ ತುತ್ತು ಕದ್ದು ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಲಂಚಬಾಕರು ಕೂತಿದ್ದಾರೆ ಎನ್ನುವುದಕ್ಕೆ ಇಲಾಖೆಯಲ್ಲಿ ರೂ. ೨೫೦ ಕೋಟಿ ಬೃಹ್ಮಾಂಡ ಭ್ರಷ್ಟಾಚಾರ ನಡೆದಿರುವುದಾಗಿ ವಕೀಲರೊಬ್ಬರು ಆರೋಪ ಮಾಡಿದಲ್ಲದೇ ಲೋಕಾಯುಕ್ಕೆ ದೂರು ನೀಡಿದ್ದಾರೆ.

ಹೌದು, ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ, ಕೇಂದ್ರದಲ್ಲಿ ಬೃಹತ್ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ವಂಚನೆಯ ಸುದ್ದಿ ಕೇಳಿ ಬಂದಿದ್ದು, ಇದರಿಂದಾಗಿ ಬಡ ವಿದ್ಯಾರ್ಥಿಗಳ ಭವಿಷ್ಯ ಮಾರಾಟಕ್ಕೆ ಇಟ್ಟಂತೆ ಆಗಿದೆ ಎನ್ನುವುದು ನೋವಿನ ಸಂಗತಿ ಎಂದು ದೂರುದಾರ ವಕೀಲ ನಿಖೀಲ್‌ ಎಂ. ಅವರು ಸೂಕ್ತ ತನಿಖೆಗೆ ಆಗ್ರಹಿಸಿ ಲೋಕಾಯುಕ್ತಾಗೆ ದೂರು ಸಲ್ಲಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಪರಿಶಿಷ್ಟ ಜಾತಿ, ಸಮುದಾಯದ ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಸ್ಥಾಪಿಸಲಾದ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಲ್ಲಿ (ಹಿಂದಿನ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ – PETC) ನಡೆಯುತ್ತಿರುವ ವ್ಯವಸ್ಥಿತ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ಸಾರ್ವಜನಿಕ ಹಣದ ಲೂಟಿಯ ಬಗ್ಗೆ ತಮ್ಮ ಗಮನ ಸೆಳೆಯಲು ಬಯಸುತ್ತೇನೆ. ಈ ಸಂಸ್ಥೆಯ ಮೂಲ ಉದ್ದೇಶವು ಐಎಎಸ್, ಕೆಎಎಸ್, ಎಫ್‌ಡಿಎ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದಾಗಿತ್ತು. ಆದರೆ, ಪ್ರಸ್ತುತ ಈ ಸಂಸ್ಥೆಯು ಭ್ರಷ್ಟಾಚಾರದ ಕಾರ್ಖಾನೆಯಾಗಿ ಮಾರ್ಪಟ್ಟಿದೆ ಎಂದು ದೂರುದಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಕರಿಯರ್‌ ಕಸಿಯುವ ಕರಿಯರ್‌ ಅಕಾಡೆಮಿಗಳು:

ಇನ್ನೂ ಕೋಚಿಂಗ್‌ ಮಾಫೀಯಾಗಳು ಬಡವರ ಮಕ್ಕಳನ್ನು ಒಂದು ಫ್ಯಾಕ್ಟರಿ ಪ್ರೊಡೆಕ್ಟ್‌ (ವಸ್ತುಗಳು) ರೀತಿಯಲ್ಲ ಕಾಣುತ್ತಿದ್ದು, ಅವರ ಹೆಸರಲ್ಲಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಮುಂದಾಗಿದ್ದು ಖೇದಕರ ಸಂಗತಿ. ವಿಜಯಪುರ ಜಿಲ್ಲೆಯ ಎಸ್‌ಬಿ ವಿಸ್ಡಮ್‌ ಕರಿಯರ್‌ ಅಕಾಡೆಮಿ ಟ್ರಸ್ಟ್‌ (SB Wisdom Career Academy Trust), ಬೆಂಗಳೂರಿನ ವಿಜಯನಗರದಲ್ಲಿರವ ಅವಂತಿ ಕ್ಲಾಸಸ್ ಹಾಗೂ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ನೌಕರರಾದ ಸುನೀಲ ಪಿ ( ಪ್ರ.ದ.ಸ. ), ಪ್ರದೀಪ್ ಹೆಚ್ ಎಂ. ಸಂಜು, ಅಕ್ಷಯ್ ಬೆಂಗಳೂರು ಇವರುಗಳು ಈ ೨೫೦ ಕೋಟಿ ಹಗರಣದ ಮುಖ್ಯ ಭಾಗಿದಾರರು ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ದೂರಿನಲ್ಲಿ ಏನೀದೆ…?:

ಕ್ರಿಯಾ ಯೋಜನೆ ಮತ್ತು ಬೋಗಸ್ ಹಾಜರಾತಿ: ಈ ವರ್ಷ ಸಂಸ್ಥೆಯ ಕ್ರಿಯಾ ಯೋಜನೆಯಲ್ಲಿ ರೂ. 87.00 ಕೋಟಿ ಮೀಸಲಿಟ್ಟಿದರೂ, ಮಣಿವಣ್ಣನ್ ಮತ್ತು ಅಂಜುಂ ಅವರು ಅದನ್ನು 250.00 ಕೋಟಿಗೆ ಹೆಚ್ಚಿಸಿ ಅನುಮೋದನೆ ಪಡೆದಿದ್ದಾರೆ. ಇದಕ್ಕೆ ಇಲಾಖೆಯ ಸಚಿವರು ಸಹಿ ಮಾಡಿರುವುದು ಅವರು ಕೂಡ ಈ ಹಗರಣದಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷಿಯಾಗಿದೆ.

ನಿಯಮ ಗಾಳಿಗೆ ತೂರಿ; ಅಂಜುಂ ಹಫೀಜ್‌ ನೇಮಕ: ದಿನಾಂಕ 04.11.2023 ರಲ್ಲಿ, ಸ್ವಂತ ವೇತನ ಶ್ರೇಣಿ ಮೇಲೆ ಅರ್ಹತೆ ಇಲ್ಲದಿದ್ದರೂ ಸಹ ಡಾ. ಕೆ. ಅಂಜುಂ ಹಫೀಜ್, ಪರೀಕ್ಷತಾ ಸಹಾಯಕ ನಿಯಂತ್ರಕರು, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ರವರನ್ನು ಸಮಾಜ ಕಲ್ಯಾಣ ಇಲಾಖೆಯ ವೃಂದರ ಮತ್ತು ನೇಮಕಾತಿ ನಿಯಮಗಳು ಸಾರಾಸಗಟಾಗಿ ಉಲ್ಲಂಘಿಸಿ ಮೇಜರ್ ಮಣಿವಣ್ಣನ್ರವರ ಕೃಪಾ ಕಟಾಕ್ಷದಿಂದ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಆಡಳಿತಾಧಿಕಾರಿ ಹುದ್ದೆಗೆ ನಿಯಮಬಾಹಿರವಾಗಿ ನೇಮಕ ಮಾಡಿರುವುದಾಗಿ ಕಂಡುಬಂದಿದೆ.

POREX ಪಾವತಿಗೆ ಕೋಕ್‌: ಚೆಕ್‌ ಮೂಲಕ ಪಾವತಿ:  ಎಲ್ಲಾ ವ್ಯವಹಾರಗಳನ್ನು ಖಜಾನೆ ಮೂಲಕವೇ ಮಾಡಲು ಸೂಚಿಸಿರುತ್ತದೆ. ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕವೇ ಡಾ.ಬಿ. ಆರ್ ಅಂಬೇಡ್ಕರ್ ಅಂತರಾಷ್ಟ್ರೀಯ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಮಂಜೂರು ಮಾಡಲಾಗುತ್ತಿದೆ. ಸದರಿ ಯೋಜನೆಯ ಫಲಾನುಭವಿಗಳಿಗೆ FOREX ಮೂಲಕ ಸಹಾಯ ಧನ ಮಂಜೂರು ಮಾಡಬೇಕಿದೆ ಹಾಗೂ ಈ ಸಂಬಂಧವೂ ಸಹ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ಕೇವಲ POREX ಪಾವತಿಗೆ ಮಾತ್ರ SBI ನಲ್ಲಿ ಖಾತೆಯನ್ನು ವ್ಯವಹರಿಸಲಾಗುತ್ತಿದೆ. ಆದರೆ, ಅಂಜುಂ ರವರು ತಾನೇ ನಿರ್ದೇಶಕರು ಎಂದು ಆರ್ಥಿಕ ಇಲಾಖೆಯ ಆದೇಶದ ಉಲ್ಲಂಘನೆಯಾಗಿದೆ.

ಇಲಾಖೆಯಲ್ಲಿ ಏಕಾಧಿಪತ್ಯದ ನೀತಿ ಅನುಸರಣೆ: ಅಂಜುಂ ಅವರು ತಮ್ಮದೇ ಆದ ಹೊರಸಂಪನ್ಮೂಲ ಸಿಬ್ಬಂದಿಗಳ ತಂಡವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕರೆತಂದು ಹಗರಣಗಳನ್ನು ನಡೆಸುತ್ತಿದ್ದಾರೆ.  ಮಣಿವಣ್ಣನ್ ಅವರು ಜಿಲ್ಲೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದರೂ, ಅವರು ಇಂದಿರಾ ಗಾಂಧಿ ಕೇಂದ್ರದ ತರಬೇತಿಗಳನ್ನು ಪರಿಶೀಲಿಸುವಂತಿಲ್ಲಇದು ಸ್ಪಷ್ಟವಾಗಿ ಇಲಾಖೆಯು ಏಕಾಧಿಪತ್ಯಕ್ಕೆ ಒಳಪಟ್ಟಿರುವ ಲಕ್ಷಣವಾಗಿದೆ.

ಅಕ್ರಮದ ಬಗ್ಗೆ ದೂರುದಾರರ ಆಗ್ರಹವೇನು:  ಬೃಹತ್ ಹಗರಣದ ಬಗ್ಗೆ ಸಮಗ್ರ ತನಿಖೆಯನ್ನು ಪ್ರಾರಂಭಿಸಬೇಕು,   ಆಪಾದಿತರಾದ ಅಂಜುಂ ಹಫೀಜ್, ಮಣಿವಣ್ಣನ್, ಸಚಿವರು ಮತ್ತು ಇದರಲ್ಲಿ ಭಾಗಿಯಾದ ಇತರ ಎಲ್ಲ ಅಧಿಕಾರಿಗಳ ಪಾತ್ರದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು, ಅಕ್ರಮವಾಗಿ ನೀಡಲಾದ ಟೆಂಡರ್‌ಗಳನ್ನು ರದ್ದುಪಡಿಸಿ, ದುರುಪಯೋಗವಾದ ಸಾರ್ವಜನಿಕ ಹಣವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು. 2025-26 ನೇ ಸಾಲಿನಲ್ಲಿ ಕರೆಯಲಾಗಿರುವ ಪಿಸಿ / ಪಿಎಸ್‌ಐ ಮುಂತಾದ ಟೆಂಡರ್‌ಗಳನ್ನು ತನಿಖೆಯಾಗುವವರೆಗೂ ಈ ಟೆಂಡರ್‌ಗಳನ್ನು ರದ್ದುಗೊಳಿಸಲು ಮಧ್ಯಂತರ ಆದೇಶ ಹೊರಡಿಸಬೇಕು, ತನಿಖೆಯ ನಂತರ, ತಪ್ಪಿತಸ್ಥರೆಂದು ಕಂಡುಬಂದ ಎಲ್ಲಾ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಬೇಕು. ಈ ಭ್ರಷ್ಟಾಚಾರದ ಜಾಲವನ್ನು ಬೇರುಸಹಿತ ಕಿತ್ತೊಗೆದು, ಸಾರ್ವಜನಿಕ ಹಣವನ್ನು ರಕ್ಷಿಸಿ, ಅರ್ಹ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ದೂರುದಾರ ವಕೀಲರಾದ ನಿಖೀಲ್‌ ಅವರು ಆಗ್ರಹಿಸಿದ್ದಾರೆ.

Exit mobile version