ಸಮಾಜ ಕಲ್ಯಾಣ ಇಲಾಖೆಯೋ..? ಅಧಿಕಾರಿಗಳ ಕಲ್ಯಾಣ ಇಲಾಖೆಯೋ..?
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ರಾಜ್ಯ ಸರ್ಕಾರದ ಪ್ರಮುಖ ಇಲಾಖೆಯಾಗಿದ್ದು, ಇದರ ಮುಖ್ಯ ಧ್ಯೇಯೋದ್ದೇಶ ದಮನಿತರ ಸರ್ವತೋಮುಖ ಅಭಿವೃದ್ದಿಗಾಗಿ ಸದಾಕಾಲ ಕಾರ್ಯನಿರ್ವಹಿಸುವ ಸಮಾಜ ಕಲ್ಯಾಣ ಇಲಾಖೆಯಲ್ಲಿಯೇ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದಾಗಿ ಬಿವಿಎಸ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮೂರ್ತಿ ಭೀಮರಾವ್ ಅವರು ಸಿಎಂಗೆ ದೂರು ನೀಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಸರ್ಕಾರದ ವಿವಿಧ ಸೇವೆಗಳಲ್ಲಿ ಆಯ್ಕೆಯಾಗಲು ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸಲು ಸಮುದಾಯದ ವಿದ್ಯಾರ್ಥಿಗಳನ್ನು ಸನ್ನದ್ದಗೊಳಿಸಲು ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರೀಕ್ಷಾ ಪೂರ್ವ ತರಬೇತಿ ಕೇಂದ್ರವನ್ನು ಆರಂಭಿಸಿ, ಅದಕ್ಕೆ ಉಪನಿರ್ದೇಶಕ ವೃಂದದ ಅಧಿಕಾರಿಯನ್ನು ಮುಖ್ಯ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿರುತ್ತದೆ. ಈ ಅಧಿಕಾರಿಯು ನೇರವಾಗಿ ಇಲಾಖೆಯ ಆಯುಕ್ತರ ಅಧೀನದಲ್ಲಿ ಪ್ರಬುದ್ಧ ಯೋಜನೆ ಒಳಗೊಂಡಂತೆ ನಾಗರಿಕ ಪರೀಕ್ಷೆಗಳಿಗೆ ಸಮುದಾಯ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಕಾರ್ಯನಿರ್ವಹಿಸುತ್ತಿದ್ದರು.
2023 ರಲ್ಲಿ ಸಂಸ್ಥೆಯ ಪ್ರಾಮುಖ್ಯತೆ ಮನಗಂಡು, ಸದರಿ ಸಂಸ್ಥೆಗೆ ಇಲಾಖೆಯ ಅಪರ ನಿರ್ದೇಶಕ ವೃಂದದ ಅಧಿಕಾರಿಯನ್ನು ನೇಮಿಸಿ, ಅವರ ಅಧೀನದಲ್ಲಿ ಮುಖ್ಯ ಆಡಳಿತಾಧಿಕಾರಿ ಕಾರ್ಯನಿರ್ವಹಿಸಲು ಕ್ರಮ ತೆಗೆದುಕೊಳ್ಳಲಾಗಿರುತ್ತದೆ. ಈ ಕ್ರಮ ಮೊದಲಿಗೆ ಸದರಿ ಪರೀಕ್ಷಾ ಪೂರ್ವ ತರಬೇತಿ ಕೇಂದ್ರಕ್ಕೆ ಸ್ವಾಯತ್ತತೆ ಕೊಡುವ ದೃಷ್ಠಿಯಿಂದ ಇದ್ದರೂ ಸಹ, ಸದರಿ ಕ್ರಮದ ಹಿಂದೆ ಇದ್ದ ಇಲಾಖಾ ಮುಖ್ಯಸ್ಥರಾದ ಶ್ರೀ ಮಣಿವಣ್ಣನ್ ರವರ ಒಳಸಂಚು ಸಾರ್ವಜನಿಕರ ಗಮನಕ್ಕೆ ಬಂದಿರುವುದಿಲ್ಲ.
ಮೊದಮೊದಲಿಗೆ, ಸರಿಯಾಗಿ ಇದ್ದ ಸಂಸ್ಥೆಗೆ ಇದ್ದಕ್ಕಿದ್ದಂತೆ ಇಲಾಖಾ ಮುಖ್ಯಸ್ಥರಾದ ಪ್ರಧಾನ ಕಾರ್ಯದರ್ಶಿಗಳು ತಮಗೆ ಬಹು ಆಪ್ತರಾದ ಹಾಗೂ ಬಹುಮುಖ್ಯವಾಗಿ ಮುಖ್ಯಾಡಳಿತಾಧಿಕಾರಿ ಹುದ್ದೆಯ ಸರಿಸಮಾನ ವೃಂದದ ಉಪನಿರ್ದೇಶಕರ ಹುದ್ದಗೆ ಅರ್ಹರೇ ಇಲ್ಲದ ಶ್ರೀಮತಿ ಅಂಜುಂ ಹಫೀಜ್ ಎಂಬ ಮಹಿಳಾ ಅಧಿಕಾರಿಯನ್ನು ತಮ್ಮ ಎಲ್ಲಾ ಪ್ರಭಾವ ಬಳಸಿ, ಅದರಲ್ಲೂ ಸಹ ಪ್ರಶಿಕ್ಷಣಾರ್ಥಿಯನ್ನು ಈ ಹುದ್ದೆಗೆ ತಂದು ಆದಾರಾತಿಥ್ಯ ಮಾಡುವ ಮೂಲಕ ಸರಕಾರಿ ಆದೇಶ ಉಲ್ಲಂಘಿಸಿದ್ದಾರೆ.
ಮುಂದುವರೆದು, ತನ್ನ ನಿರ್ದೇಶಕರಾದ ಸಾಬೀರ್ ಅಹಮದ ಮುಲ್ಲಾರವರು ಅಕ್ರಮಕ್ಕೆ ಸಹಕಾರ ನೀಡುತ್ತಿಲ್ಲವೆಂದು, ಅವರ ಮೇಲೆ ವಾಮಾಚಾರ ಪ್ರಯೋಗಿಸಿ, ಅವರನ್ನು ಭಯಭೀತಗೊಳಿಸಿ, ಆ ಅಪರ ನಿರ್ದೇಶಕರೇ, ಸದರಿ ಸಂಸ್ಥೆ ಬಿಟ್ಟು ರಜಾ ಹಾಕಿ ಓಡಿಹೋಗುವಂತೆ ಮಾಡಿರುತ್ತಾರೆ. ಅವರ ರಜಾ ಅವಧಿಯಲ್ಲಿ ಪ್ರಧಾನ ಕಾರ್ಯದರ್ಶಿಗಳ ಕೃಪಾಕಟಾಕ್ಷದಿಂದ ತಾನೇ ನಿರ್ದೇಶಕರ ಹುದ್ದೆಯ ಪ್ರಭಾರದಲ್ಲಿದ್ದು, ಎರಡೂ ಕೈಗಳಲ್ಲಿ ಭ್ರಷ್ಟಾಚಾರ ಮಾಡುವುದರಲ್ಲಿ ನಿಸ್ಸೀಮರು.
ಪ್ರತಿ ತರಬೇತಿ ಕಾರ್ಯಕ್ರಮಕ್ಕೆ 4 ವಿಭಾಗಗಳಲ್ಲಿ ವಿಭಾಗಿಸಿ, ಸಚಿವ ಸಂಪುಟ ಅನುಮೋದನೆ ಇಲ್ಲದೇ, ನಾಲ್ಕು-ನಾಲ್ಕು ಟೆಂಡರುಗಳನ್ನು ಆಹ್ವಾನ ಮಾಡಿ, KTPP ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಅಲ್ಲದೇ, ರೂ. 10.00 ಕೋಟಿಗೂ ಮೀರಿ ಟೆಂಡರುಗಳಿಗೆ ಪ್ರಧಾನ ಕಾರ್ಯದರ್ಶಿಗಳಿಗೆ ಅನುಮೋದನೆ ನೀಡಲು ಅವಕಾಶ ಇಲ್ಲದೇ ಇದ್ದರೂ ಸಹ ಅನುಮೋದನೆ ನೀಡುತ್ತಿದ್ದಾರೆ. ಅಲ್ಲದೇ, ಕೌಶಲ್ಯಾಭಿವೃದ್ದಿ ಇಲಾಖೆಯಿದ್ದರೂ ಸಹ Drone Tender, ಇತ್ಯಾದಿ ಅನಾವಶ್ಯಕ ತರಬೇತಿಗಳ ನೆಪದಲ್ಲಿ ಕೋಡಿ ಕೋಟಿ ಲೂಟಿ ಮಾಡುತ್ತಿರುವುದು ವಾಸ್ತವಾಂಶವಾಗಿದೆ ಹಾಗೂ ಇದಕ್ಕೆ ಪ್ರಧಾನ ಕಾರ್ಯದರ್ಶಿಗಳೇ ನೇರವಾಗಿ ಅಂಜುಂ ರವರಿಗೆ ಅವಕಾಶ ನೀಡುತ್ತಿರುವುದು ಸತ್ಯವಾಗಿದೆ. ಅಲ್ಲದೇ, PSI ತರಬೇತಿ ಸಂಬಂಧ ಒಂದೇ ತರಬೇತಿಗೆ 18 ಕೋಟಿಗೂ ಮೀರಿ ಟೆಂಡರ್ ಕರೆದಿದ್ದು, ಪ್ರಧಾನ ಕಾರ್ಯದರ್ಶಿಗಳೇ ಅನುಮೋದನೆ ನೀಡುರುವುದು ಆರ್ಥಿಕ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು ಇದರ ವಿರುದ್ಧ ಆದಷ್ಟು ಬೇಗ ಸರಕಾರ ಕಠಿಣ ಕ್ರಮ ಕೈಗೊಂಡು ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಶೋಷಿತ ವಿದ್ಯಾರ್ಥಿ ಮುಖಂಡರು ಆಗ್ರಹಿಸಿದ್ದಾರೆ.

