ನಿವೃತ್ತ ನ್ಯಾಯಧೀಶ ಮಲ್ಲಿಕಾರ್ಜುನ್ ಕಿನ್ನಿಕೇರಿ ಅಭಿಮತ | ವಕೀಲರು ಸಂವಿಧಾನ ರಕ್ಷಣೆಗೆ ಮುಂದಾಗುವಂತೆ ಕರೆ
ಬೆಂಗಳೂರು: ಸಮಾಜವನ್ನು ತಿದ್ದುವ ಮಹತ್ತರವಾದ ಹೊಣೆಗಾರಿಕೆ ವಕೀಲರ ಮೇಲಿದ್ದು, ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿ ಕೂಡ ಸಮಾಜಮುಖಿಯಾಗಿ ಚಿಂತನೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ಕಾಪಾಡುವಂತವರಾಗಬೇಕು ಎಂದು ನಿವೃತ್ತ ನ್ಯಾಯಧೀಶರಾದ ಮಲ್ಲಿಕಾರ್ಜುನ್ ಕಿನ್ನಿಕೇರಿ ಅವರು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಓಕಳಿಪುರಂನಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ಸಂವಿಧಾನ ದಿನ’ ಸಮಾರಂಭವನ್ನು ಉದ್ಘಾಟಿಸಿ ನಂತರ ಅವರು ಮಾತಾಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಹೋರಾಟಗಳಿಂದ ಹಿಡಿದು ಇಲ್ಲಿಯ ವರೆಗೂ ಕೂಡ ಸಮಾಜದ ಪ್ರತಿಯೊಂದು ಬದಲಾವಣೆಯಲ್ಲಿ ವಕೀಲರದ್ದು ಅಪಾರ ಕೊಡುಗೆ ಇದೆ. ಹಾಗಾಗಿ ಪ್ರತಿಯೊಂದು ಹಂತದಲ್ಲು ಜನರೊಂದಿಗೆ ನಿಲ್ಲುವ ಮೂಲಕ ದೇಶದ ಸಂವಿಧಾನವನ್ನು ಕಾಪಾಡುವ ಜವಾಬ್ದಾರಿ ವಕೀಲರ ಮೇಲಿದೆ ಎಂದು ಹೇಳಿದರು. ಜನಸಾಮಾನ್ಯರು ಕಾನೂನು ಎಂದರೆ ಸಾಮಾನ್ಯ ಪರಿಜ್ಞಾನ ಎಂದರ್ಥ ಮಾಡಿಕೊಳ್ಳಬೇಕು. ಅಧಿಕಾರ ಇರುವವರು ಕಾನೂನು ಮಾಡುತ್ತಾರೆ. ಜನಸಾಮಾನ್ಯರು ಅದನ್ನು ಪಾಲನೆ ಮಾಡುತ್ತಾರೆ. ಕಾನೂನು ಎಂತದ್ದೆ ಬರಲಿ ಅದು ಸಂವಿಧಾನದ ಮೂಲಕ ಬರಬೇಕು. ಇಲ್ಲವಾದರೆ ಅದು ಮಾನ್ಯವಾಗುವುದಿಲ್ಲ. ಹಾಗಾಗಿಯೇ ಸಂವಿಧಾನವನ್ನು ಎಲ್ಲಾ ಕಾನೂನುಗಳ ತಾಯಿ ಎನ್ನುತ್ತಾರೆ ಎಂದು ಹೇಳಿದರು.
ದೇಶದ ಕೆಲ ಸಮುದಾಯದ ಜನರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಎಂದರೆ ಅವರು ಕೇವಲ ದಲಿತರಿಗಾಗಿ ಎಲ್ಲವೂ ಮಾಡಿದವರು ಎಂದು ಅಪಾರ್ಥ ಮಾಡಿಕೊಂಡಿದ್ದಾರೆ. ಆದರೆ, ವಾಸ್ತವದಲ್ಲಿ ಅವರು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದವರು, ಯಾರಿಗೂ ಅನ್ಯಾಯ ಮಾಡದೆ ಎಲ್ಲಾ ಸಮುದಾಯಕ್ಕು ಮೀಸಲಾತಿ ಒದಗಿಸುವ ಮೂಲಕ ‘ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು’ ಎನ್ನುವುದನ್ನು ಸಾಬೀತು ಪಡಿಸಿದವರು ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸೇವಾಶ್ರಮ ಟ್ರಸ್ಟ್ ನ ಟ್ರಸ್ಟಿಯಾದ ಸರಸ್ವತಿ ಅವರು ಮಾತನಾಡಿ, ದೇಶದ ಯಾವುದೋ ಮೂಲೆಯಲ್ಲಿ ಹುಟ್ಟಿ ಮತ್ತ್ಯಾವುದೋ ಕಡೆ ಬಂದು ಮುಕ್ತವಾಗಿ ಬದುಕಲು ಅವಕಾಶ ಕಲ್ಪಿಸಿಕೊಡುವ ದೇಶದ ಸಂವಿಧಾನಕ್ಕೆ ಗೌರವ ನೀಡಿ ಅದನ್ನು ಉಳಿಸಿಕೊಳ್ಳಲು ಮುಂದಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಪ್ರಾಂಶುಪಾಲೆ ಪ್ರೊ. ಕಾರ್ತಿಕಾ ರಾಮಮೂರ್ತಿ ರವರು ಮಾತನಾಡಿ , ಈ ದಿನ ನಾವುಗಳು ಹೆಮ್ಮೆಯಿಂದ ಆಚರಣೆ ಮಾಡುವ ದಿನ ಇದಾಗಿದ್ದು. ಇಂದು ಅನೇಕ ರಾಜ್ಯದ ವಿದ್ಯಾರ್ಥಿಗಳು ಇಲ್ಲಿ ಸೇರಲು ಕೇವಲ ನಮ್ಮ ಕಾಲೇಜು ಮಾತ್ರ ಕಾರಣವಲ್ಲದೆ ಈ ದೇಶದ ಸಂವಿಧಾನದ ಶಿಕ್ಷಣದ ಹಕ್ಕು ಬಹುಮುಖ್ಯವಾಗಿದೆ. ನೀವುಗಳು ಮುಂದಿನ ತಲೆಮಾರಿಗೆ ಉತ್ತಮವಾದ ನ್ಯಾಯದೊರಕಿಸುವ ವಕೀಲರಾಗ ಬೇಕಿದ್ದು ಸಂವಿಧಾನವನ್ನು ಅರ್ಥಗರ್ಭೀತವಾ ತಿಳಿದುಕೊಳುವುದು ಅದನ್ನು ಕಪಾಡಿಕೊಳ್ಳುವುದು . ಅದರ ಆಶಯಗಳಿಗೆ ದುಡಿವುದು ನಿಮ್ಮ ನಮ್ಮೇರ ಕರ್ತವ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯಸ್ಥರಾದ ಪ್ರತಿಷ್ಠ ರಾಮಮೂರ್ತಿ, ಹಾಗೂ ಸಿಬ್ಬಂದಿಗಳಾದ ಸಹಾಯಕ ಪ್ರಾಧ್ಯಪಕರಾದ ಶರಣ್ಯ ಆರ್, ಸುಖಿತ ಶೆಟ್ಟಿ , ವಾಣಿ , ವಿಜಯ, ಸುಶ್ಮಿತ , ಪೂಜಾ , ವಸಂತ, ಮಲ್ಲಿಕಾರ್ಜುನ್, ಮಧುಸುದನ್ , ಶರವಣ್ಣನ್ , ದಶರತನ್ , ರಮೇಶ್ , ಸಂಸ್ಥೆಯ ಕಾರ್ಯದರ್ಶಿ ಪೆರುಮಾಳು ಸ್ವಾಮಿ, ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

