ಬೆಂಗಳೂರು: ನಗರದ ಗಾಂಧಿಭವನದ ಬಾಪು ಸಭಾಂಗಣದಲ್ಲಿ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಕರ್ನಾಟಕ ರಾಜ್ಯ ಘಟಕದ ವತಿಯಿಂದ ರಾಜ್ಯ ಮಟ್ಟದ ಸಭೆ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಪರಿವರ್ತನೆಯ ಗೀತೆಯನ್ನು ಹಾಡಲಾಯಿತು. ಬಳಿಕ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಿ, ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ತಾಲೂಕುಗಳಿಂದ ಆಗಮಿಸಿದ್ದ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಘಟಕಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಮಾಜದ ಹಿತೈಷಿಗಳು ಭಾಗವಹಿಸಿದ್ದರು. ಸಂಘಟನೆಯ ಮುಂದಿನ ಕಾರ್ಯಯೋಜನೆಗಳು, ಸಾಮಾಜಿಕ ಹೋರಾಟಗಳು, ಸಂಘಟನಾ ವಿಸ್ತರಣೆ ಹಾಗೂ ಸಂವಿಧಾನಿಕ ಹಕ್ಕುಗಳ ರಕ್ಷಣೆಯ ಕುರಿತು ಮುಖಂಡರು ಚರ್ಚಿಸಿ ಹಲವು ಸಲಹೆಗಳನ್ನು ಹಂಚಿಕೊಂಡರು.
ಸಂಘಟನೆಯ ರಾಜ್ಯಾಧ್ಯಕ್ಷ ಸಿ. ರಘು ಮಾತನಾಡಿ, “ನಿಮ್ಮೆಲ್ಲರ ಉಪಸ್ಥಿತಿಯೇ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್‌ನ ಶಕ್ತಿ. ನಮ್ಮ ಸಮಯ, ಜ್ಞಾನ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ನೀಡುವ ಮೂಲಕ ಒಂದಾಗೋಣ, ಸಂಘಟಿತರಾಗೋಣ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಒಗ್ಗಟ್ಟಿನಿಂದ ಹೋರಾಡೋಣ” ಎಂದು ಕರೆ ನೀಡಿದರು.
“ಭೀಮ್ ಆರ್ಮಿ ಎಂದರೆ ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣ, ಸ್ವಾಭಿಮಾನ ಮತ್ತು ಸಂವಿಧಾನಿಕ ಹಕ್ಕುಗಳಿಗಾಗಿ ಸಂಘಟಿತವಾಗಿ ಕೆಲಸ ಮಾಡುವ ಜವಾಬ್ದಾರಿ” ಎಂದು ಅವರು ಹೇಳಿದರು.
ಯಶಸ್ಸು ಕೇವಲ ಸಂಘಟನೆಯ ಸಂಖ್ಯೆಯಲ್ಲಿ ಇಲ್ಲ. ಪ್ರಜ್ಞೆ, ಸಂಘಟನೆ ಹಾಗೂ ರಾಜಕೀಯ ಅರಿವು ಮುಖ್ಯ. ಕಾನೂನುಗಳನ್ನು ರೂಪಿಸುವ ಅಧಿಕಾರವನ್ನು ಪಡೆಯುವ ಮೂಲಕವೇ ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಮೇಲಿನ ಅನ್ಯಾಯ, ದೌರ್ಜನ್ಯ ಹಾಗೂ ಹತ್ಯೆಗಳನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯ. ಸಮುದಾಯದ ಅಭಿವೃದ್ಧಿಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲಗಳನ್ನು ಪಡೆಯಲು ರಾಜಕೀಯ ಅಧಿಕಾರವೂ ಪ್ರಮುಖವಾಗಿದೆ ಎಂದು ರಘು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಯುವಜನರ ಹೆಚ್ಚಿನ ಭಾಗವಹಿಸುವಿಕೆ, ಸಂಘಟನಾ ವಿಸ್ತರಣೆ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಿಕ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಮುಂದಿನ ಹೋರಾಟಗಳ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಘಟನಾ ಸಚಿವರಾದ ವಿನಯ್ ಕರ್ನಿಂಗ್, ಯಶಪಾಲ್ ಬೋರೆ, ಅನ್ನಪೂರ್ಣ ಬೆಳ್ಳನವರ, ರಾಜ್ಯಾಧ್ಯಕ್ಷ ಸಿ. ರಘು, ರಾಷ್ಟ್ರ ಸಮಿತಿ ಸದಸ್ಯ ಪುಶ್ಪೇಂದ್ರ, ರಾಜು ಅಣಭಿ, ರಜನಿಕಾಂತ್, ಶಾಕ್ಯ ಸುಂದರ್, ಸಾಕೇ ನಾರಾಯಣ ಸೇರಿದಂತೆ ಹಲವು ಗಣ್ಯರು, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

