Site icon NBTV Kannada

ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಜೆಡಿಎಸ್ ಖಂಡನೆ ಏರಿಕೆ ದರ ಹಿಂಪಡೆಯಲು ಆಗ್ರಹಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ

ತುಮಕೂರು: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಜೆಡಿಎಸ್ ಬುಧವಾರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು. ಏರಿಸಿರುವ ಪ್ರಯಾಣ ದರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆ ಮಾಡುತ್ತಾ ಜನರಿಗೆ ಹೊರೆ ಮಾಡುತ್ತಲೇ ಬಂದಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ, ದಿನಬಳಕೆ ಪದಾರ್ಥಗಳ ಬೆಲೆ ಏರಿಕೆ ಮಾಡುತ್ತಾ ಜನಸಾಮಾನ್ಯರು ನೆಮ್ಮದಿಯಿಂದ ಬಾಳಲಾಗದ ಪರಿಸ್ಥಿತಿ ತಂದಿದೆ ಎಂದು ಟೀಕಿಸಿದರು.

ಅಧಿಕಾರ ಪಡೆಯಲು ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ ಯೋಜನೆಗಳನ್ನು ಸಮರ್ಪಕವಾಗಿ ನಿಭಾಯಿಸಲಾಗದೆ, ಜನಬಳಕೆಯ ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಳ ಮಾಡಿ ಜನರಿಗೆ ಅನ್ಯಾಯ ಮಾಡುತ್ತಿದೆ. ಈಗಾಗಲೇ ರಾಜ್ಯ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ, ನಷ್ಟ ಭರಿಸಲು ೨೦೦ ಕೋಟಿ ರೂ.ಸಾಲ ತರಲು ಮುಂದಾಗಿದೆ. ಈ ಮೂಲಕ ರಾಜ್ಯದ ಜನರ ತಲೆ ಮೇಲೆ ಮತ್ತಷ್ಟು ಸಾಲದ ಹೊರೆ ಹೊರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ, ಭ್ರಷ್ಟಾಚಾರ, ಜನ ವಿರೋಧಿ ನೀತಿಗಳೇ ಸರ್ಕಾರದ ಪ್ರಮುಖ ನೀತಿಗಳಾಗಿವೆ. ಈ ಸರ್ಕಾರಕ್ಕೆ ಭವಿಷ್ಯವಿಲ್ಲ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಜನಪರವಾದ ಕಾರ್ಯಕ್ರಮಗಳನ್ನು ಮಾಡಲಿ. ಇಲ್ಲದಿದ್ದರೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಅಗತ್ಯ ವಸ್ತುಗಳ ಬೆಲೆ ಏರಿಕೆ  ಮಾಡಿ ಜನಸಾಮಾನ್ಯರಿಗೆ ಏರಿಕೆಯ ಹೊರೆ ಹೊರಿಸುತ್ತಿದೆ. ಸಾಲದಕ್ಕೆ ಈಗ ಶೇಕಡ ೧೫ರಷ್ಟು ಬಸ್ ಪ್ರಾಯಾಣ ದರ ಹೆಚ್ಚಳ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ದಿವಾಳಿಯಾಗಿರುವ ಸರ್ಕಾರ ಸಾರಿಗೆ ಸಂಸ್ಥೆಗೆ ೨೦೦ ಕೋಟಿ ರೂ. ಸಾಲ ಪಡೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದರು.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಿಂದ ಆದ ನಷ್ಟವನ್ನು ಭರಿಸಲು ಪ್ರಯಾಣ ದರ ಹೆಚ್ಚಳ ಮಾಡಿ ಪುರುಷ ಪ್ರಯಾಣಿಕರಿಂದ ವಸೂಲಿ ಮಾಡಲು ಮುಂದಾಗಿದೆ. ಒಂದು ಕೈಯ್ಯಲ್ಲಿ ಕೊಟ್ಟು ಇನ್ನೊಂದು ಕೈಯ್ಯಲ್ಲಿ ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನರ ಪರವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಹಗರಣ, ಭ್ರಷ್ಟಾಚಾರದಲ್ಲಿ ಮುಳುಗಿದೆ. ರೈತರು, ಗುತ್ತಿಗೆದಾರರು, ಅಧಿಕಾರಿಗಳಿಗೆ ಆತ್ಯಹತ್ಯೆ ಭಾಗ್ಯ ಕರುಣಿಸಿದೆ. ಬಾಣಂತಿಯರ ಅಮಾನುಷ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದ್ಯಾವುದಕ್ಕೂ ಗಮನ ನೀಡದ ಸರ್ಕಾರ ಬೆಲೆ ಏರಿಕೆಯನ್ನೇ ಗುರಿ ಮಾಡಿಕೊಂಡಿದೆ. ಸರ್ಕಾರ ಕೂಡಲೇ ಏರಿಕೆ ಮಾಡಿರುವ ಬಸ್ ಪ್ರಯಾಣ ದರವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಧರಣೇಂದ್ರಕುಮಾರ್, ಟಿ.ಹೆಚ್.ಜಯರಾಮ್, ಕೆಂಪರಾಜು, ಭೈರೇಶ್, ಗಂಗಣ್ಣ, ತಾಹೇರಾ ಕುಲ್ಸಂ, ಮಧುಗೌಡ, ಚೆಲುವರಾಜು, ಗಣೇಶ್, ಮಂಡಿ ಚಂದ್ರಣ್ಣ, ಹೇಮಂತ್, ಮಂಜುನಾಥ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Exit mobile version