ಬೆಂಗಳೂರು(ಆ.21): ಕರ್ನಾಟಕ ರಾಜ್ಯದಲ್ಲಿ ಅಲೆಮಾರಿ ಸಮುದಾಯಗಳಲ್ಲಿಯೇ ಅತ್ಯಂತ ಹಿಂದುಳಿದ ಹಾಗೂ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ವಂಚಿತವಾಗಿರುವ ದಕ್ಕಲಿಗ ಸಮುದಾಯವನ್ನು ಕರ್ನಾಟಕ ಸರ್ಕಾರವು ವಿಶೇಷವಾಗಿ ಪರಿಗಣಿಸಬೇಕೆಂದು,ದಕ್ಕಲಿಗ ಸಮುದಾಯದ ಮುಖಂಡರು ಶಾಂತರಾಜ್ ರವರ ನೇತೃತ್ವದಲ್ಲಿ ವಿಧಾನ ಸೌಧ ಸಮಾಜ ಕಲ್ಯಾಣ ಇಲಾಖೆಯ ಸಚಿವಾಲಯದಲ್ಲಿ ಸಚಿವರಾದ ಕೆ.ಹೆಚ್. ಮುನಿಯಪ್ಪ ನವರನ್ನು ಬೇಟಿ ಮಾತುಕತೆ ನಡೆಸಿ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಸಲ್ಲಿಸಿದರು.
ಶತಮಾನಗಳಿಂದಲೂ ದಕ್ಕಲಿಗ ಸಮುದಾಯದ ಅನೇಕ ಕುಟುಂಬಗಳು ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಮಾದಿಗ ಸಮುದಾಯದ ಮನೆಗಳ ಮುಂದೆ ಹಾಗೂ ಹಟ್ಟಿಗಳಲ್ಲಿ ಭಿಕ್ಷಾಟನೆಯ ಮೂಲಕ ಜೀವನ ಸಾಗಿಸುತ್ತಾ ಬಂದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಅಲೆಮಾರಿ ಸಮುದಾಯಗಳಲ್ಲಿಯೇ ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟಿರುವ ಈ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರವು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಕರ್ನಾಟಕದ ಸುಮಾರು 17 ಜಿಲ್ಲೆಗಳಲ್ಲಿ ದಕ್ಕಲಿಗ ಸಮುದಾಯದ ಕುಟುಂಬಗಳು ವಾಸಿಸುತ್ತಿದ್ದು, ಸುಮಾರು 466 ಕುಟುಂಬಗಳು ಮತ್ತು 1,700ಕ್ಕೂ ಅಧಿಕ ಜನಸಂಖ್ಯೆ ಇರುವುದಾಗಿ ಸಮುದಾಯದ ಮಾಹಿತಿಯಿಂದ ತಿಳಿದುಬರುತ್ತದೆ. ಇಷ್ಟೊಂದು ದೀರ್ಘಕಾಲ ಕಳೆದರೂ ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾವಲಂಬನೆ ಹಾಗೂ ಸಾಮಾಜಿಕ ಗೌರವದ ದೃಷ್ಟಿಯಿಂದ ಸಮುದಾಯವು ಇನ್ನೂ ತೀವ್ರ ಹಿಂದುಳಿದ ಸ್ಥಿತಿಯಲ್ಲಿದೆ.
ಸಮುದಾಯದ ಪ್ರಗತಿಗೆ ಸಂಬಂಧಿಸಿದಂತೆ ಅತಿ ಕಡಿಮೆ ಸಂಖ್ಯೆಯಲ್ಲಿ ಸರ್ಕಾರಿ ಉದ್ಯೋಗಿಗಳು ಹಾಗೂ ಶಿಕ್ಷಕರು ಇದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯೆಯೂ ಅತ್ಯಂತ ಕಡಿಮೆಯಾಗಿದೆ. ಇದು ಈ ಸಮುದಾಯಕ್ಕೆ ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ವಿಶೇಷ ಗಮನದ ಅಗತ್ಯವಿರುವುದನ್ನು ಸ್ಪಷ್ಟಪಡಿಸುತ್ತದೆ.
ಆದ್ದರಿಂದ ಕರ್ನಾಟಕ ಕಾಂಗ್ರೆಸ್ ಸರ್ಕಾರವು ದಕ್ಕಲಿಗ ಸಮುದಾಯದ ಈ ದುಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಗಣಿಸಿ, ಸಮುದಾಯದ ಅಭಿವೃದ್ಧಿಗೆ ಪರಿಣಾಮಕಾರಿ ರಾಜಕೀಯ ಮತ್ತು ಆಡಳಿತಾತ್ಮಕ ಪ್ರಾತಿನಿಧ್ಯ ನೀಡಬೇಕು.
ಈ ಹಿನ್ನೆಲೆಯಲ್ಲಿ ದಕ್ಕಲಿಗ ಸಮುದಾಯದ ರಾಜ್ಯಾಧ್ಯಕ್ಷರಾದ ಶ್ರೀ ಶಾಂತರಾಜ್ ಡಿ. ದಕ್ಕಲಿಗ ಅವರನ್ನು ಅಲೆಮಾರಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಹಾಗೂ ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
ದಕ್ಕಲಿಗ ಸಮುದಾಯಕ್ಕೆ ಅಲೆಮಾರಿ ನಿಗಮದ ಮೂಲಕ ಶಿಕ್ಷಣ, ವಸತಿ, ಉದ್ಯೋಗ, ಸ್ವಯಂ ಉದ್ಯೋಗ, ಕೌಶಲ್ಯಾಭಿವೃದ್ಧಿ ಮತ್ತು ಆರ್ಥಿಕ ಸಬಲೀಕರಣಕ್ಕೆ ವಿಶೇಷ ಯೋಜನೆಗಳನ್ನು ರೂಪಿಸುವುದರ ಜೊತೆಗೆ, ಸಮುದಾಯದ ಪ್ರತಿನಿಧಿಗೆ ಸೂಕ್ತ ಜವಾಬ್ದಾರಿ ನೀಡುವುದರಿಂದ ಸರ್ಕಾರದ ಯೋಜನೆಗಳು ನೇರವಾಗಿ ಸಮುದಾಯದ ತಳಮಟ್ಟದ ಜನರಿಗೆ ತಲುಪಲು ಸಹಕಾರಿಯಾಗುತ್ತದೆ.
“ಅಸ್ಪೃಶ್ಯತೆಯೊಳಗೂ ಅಸ್ಪೃಶ್ಯರಾಗಿ ಬದುಕುತ್ತಿರುವ ದಕ್ಕಲಿಗ ಸಮುದಾಯವನ್ನು ಮುಖ್ಯವಾಹಿನಿಗೆ ತರುವುದು ಸರ್ಕಾರದ ಸಾಮಾಜಿಕ ನ್ಯಾಯದ ಹೊಣೆಗಾರಿಕೆ.”
ಈ ಬೇಡಿಕೆಯನ್ನು ಮಾನವೀಯತೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಸಮಾನತೆಯ ಆಶಯದ ಹಿನ್ನೆಲೆಯಲ್ಲಿ ಪರಿಗಣಿಸಿ, ಶ್ರೀ ಶಾಂತರಾಜ್ ಡಿ. ದಕ್ಕಲಿಗ ಅವರನ್ನು ಅಲೆಮಾರಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಕರ್ನಾಟಕ ಸರ್ಕಾರವನ್ನು ಹೃತ್ಪೂರ್ವಕವಾಗಿ ಸಮುದಾಯದ ಮುಖಂಡರು ಮನವಿ ಮಾಡಿದರು.

