ವಿಜಯಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು, ಯುವ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಮೂಲಸೌಕರ್ಯ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳು ಪ್ರತಿದಿನ ಕ್ರೀಡಾಭ್ಯಾಸಕ್ಕಾಗಿ ಕ್ರೀಡಾಂಗಣವನ್ನು ಅವಲಂಬಿಸಿದ್ದಾರೆ. ಆದರೆ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ಕ್ರೀಡಾ ಸಾಮಗ್ರಿಗಳ ಕೊರತೆ, ಜಿಮ್ ಉಪಕರಣಗಳ ನಿರ್ವಹಣೆಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿಂದ ಕ್ರೀಡಾಪಟುಗಳಿಗೆ ತೊಂದರೆ ಉಂಟಾಗುತ್ತಿವೆ ಎಂದು ಪರಿಷತ್ ಆರೋಪಿಸಿದೆ.ಕ್ರೀಡಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸಂಜೆ ವೇಳೆಯಲ್ಲಿ ಅಭ್ಯಾಸ ನಡೆಸುವ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಸಮರ್ಪಕ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಹಾಳಾಗಿರುವ ದೀಪಗಳನ್ನು ದುರಸ್ತಿ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಅಥ್ಲೆಟಿಕ್ಸ್, ಓಟ, ಜಿಗಿತ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಅಗತ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ಒದಗಿಸಬೇಕು. ಹಳೆಯ ಹಾಗೂ ಹಾಳಾಗಿರುವ ಉಪಕರಣಗಳನ್ನು ಬದಲಾಯಿಸಬೇಕು. ಕ್ರೀಡಾಂಗಣದಲ್ಲಿರುವ ಜಿಮ್ ಮತ್ತು ವ್ಯಾಯಾಮದ ಯಂತ್ರಗಳನ್ನು ದುರಸ್ತಿ ಮಾಡಿ, ನಿಯಮಿತ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.ಇದರೊಂದಿಗೆ ಕ್ರೀಡಾಂಗಣ ಬಳಕೆಗೆ ವಿಧಿಸಲಾಗುತ್ತಿರುವ ಶುಲ್ಕವನ್ನು ಕಡಿಮೆ ಮಾಡಬೇಕು. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳಿಗೆ ವಿಶೇಷ ರಿಯಾಯಿತಿ ಅಥವಾ ಉಚಿತ ಸೌಲಭ್ಯ ಕಲ್ಪಿಸಬೇಕು ಎಂದು ಪರಿಷತ್ ಮನವಿ ಮಾಡಿದೆ.ಶೌಚಾಲಯಗಳ ಸ್ವಚ್ಛತೆ, ನೀರಿನ ಲಭ್ಯತೆ, ಕಸ ವಿಲೇವಾರಿ ಹಾಗೂ ರಾತ್ರಿ ವೇಳೆ ಭದ್ರತಾ ವ್ಯವಸ್ಥೆಯನ್ನು ಸುಧಾರಿಸಬೇಕು. ಕ್ರೀಡಾಂಗಣದ ನಿರ್ವಹಣೆಗೆ ಬರುತ್ತಿರುವ ಅನುದಾನ ಹಾಗೂ ಆದಾಯ-ವೆಚ್ಚದ ವಿವರಗಳಲ್ಲಿ ಪಾರದರ್ಶಕತೆ ಇರಬೇಕು ಎಂದು ಸಂಘಟನೆ ಒತ್ತಾಯಿಸಿದೆ.ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ್ ಪೂಜಾರಿ ಮಾತನಾಡಿ, “ಕ್ರೀಡಾಂಗಣದ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದರು.ಜಿಲ್ಲಾ ನಗರ ಘಟಕದ ಅಧ್ಯಕ್ಷ ಹುಚ್ಚಪ್ಪ ಬಾವಿಮನಿ, ಪ್ರಭು ಹೊಸಮನಿ, ಮಂಜು, ಶಿವು, ಸುದೀಪ, ವಿಶ್ವನಾಥ, ಚೇತನ, ಗಿರೀಶ, ಪವನ, ಹಣಮಂತ, ಸಾಗರ, ಅಮಿತಾ, ವೀರೇಶ, ಕಾರ್ತಿಕ, ರಾಮು, ವಿಜಯಕುಮಾರ್, ಆಕಾಶ, ಹರೀಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗೆ ಮನವಿ

