Site icon NBTV Kannada

ಡಾ. ಅನಸೂಯ ಕಾಂಬಳೆ ಅವರಿಗೆ ಬುರ್ರಕಥಾ, ಜನಪದ ಕಲಾ ಟ್ರಸ್ಟ್ ವತಿಯಿಂದ ಗೌರವ ಸನ್ಮಾನ

ಧಾರವಾಡ: ದಲಿತ ಮಹಿಳಾ ಸಂವೇದನೆಯ ಮುನ್ನೋಟದ ಚಿಂತಕಿ, ವಿದ್ಯಾರ್ಥಿ ಸ್ನೇಹಿ ಡಾ. ಅನಸೂಯ ಕಾಂಬಳೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಅವರ ನಿವಾಸಕ್ಕೆ ತೆರಳಿ ಬುರ್ರಕಥಾ, ಜನಪದ ಕಲಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ನಂತರ ಸಂವಾದ ರೂಪದಲ್ಲಿ ಸುದೀರ್ಘವಾಗಿ ಮಾತನಾಡಿದ ಪ್ರಾಧ್ಯಾಪಕಿ, ಲೇಖಕಿ ಡಾ. ಅನಸೂಯ ಕಾಂಬಳೆ; ಸ್ವತಂತ್ರವಾಗಿ ಬರೆಯಲು, ಆಲೋಚಿಸಲು, ಮತ್ತೊಬ್ಬರಿಗಿಂತ ವಿಭಿನ್ನವಾಗಿ ಇರಲು ನಮ್ಮ ಯುವಕರು ರೂಢಿಸಿಕೊಳ್ಳಬೇಕಾಗಿದೆ. ಇಂದಿನ ಯುವಜನತೆ ಹೀರೋಗಳನ್ನು ಹೆಚ್ಚಾಗಿ ಗಡ್ಡಗಳಿಗಾಗಿ ಅನುಸರಿಸುತ್ತಿದ್ದಾರೆ. ಆದರೆ ಆ ಹೀರೋಗಳು ದಿನಾಲೂ ಪಾರ್ಲರ್ ಹೋಗಿ ಕ್ಲೀನ್ ಶೇವ್ ಆಗಿ ಇರುತ್ತಾರೆ. ಆದರೆ ನಮ್ಮ ವಿದ್ಯಾರ್ಥಿಗಳು ಹಾಸಿಗೆಯಲ್ಲಿ ಈಗ ಎದ್ದು ಬಂದಂತೆ ಆಕಡೆ-ಈಕಡೆ ಕೂದಲು ಎದುರು-ಬದುರು ಹರಡಿರುತ್ತವೆ. ಶಿಸ್ತು ಅನ್ನುವುದೇ ಇಲ್ಲ, ಎರಡೇ ಜೊತೆ ಬಟ್ಟೆಯಿದ್ದರೂ ಪರವಾಗಿಲ್ಲ ಶುಚಿಯಾಗಿ ಇರಬೇಕಾದದ್ದು, ಕೈಯಲ್ಲಿ ಒಂದು ಪುಸ್ತಕ ಹಿಡಿಯುವುದು(ತದನಂತರ ಅದೇ ಓದಿಸುತ್ತದೆ) ಮೊದಲು ನಿತ್ಯಕರ್ಮವಾಗಬೇಕೆಂದು ಸಲಹೆ ನೀಡುತ್ತಾ ನಾನಾ ತರದ ಹಲವಾರು ವಿಷಯಗಳನ್ನು ಮನದಟ್ಟಾಗುವಂತೆ ಚರ್ಚಿಸಿದರು.

ಇಂದು ಯುವಕರಿಗೆ ತಮ್ಮ ಆಲಸ್ಯವೇ ತಮಗೆ ಶತ್ರು ಆಗಿಬಿಟ್ಟಿದೆ. ಇದರ ಅರಿವೇ ಅವರಿಗಿಲ್ಲ. ಹಾಸಿಗೆ ಬಿಟ್ಟು ಬೆಳಿಗ್ಗೆ ಬೇಗ ಏಳುವುದೇ ಇಲ್ಲ. ಪುಸ್ತಕ ಓದುವ ಅಭ್ಯಾಸವಿಲ್ಲ. ಚರ್ಚೆಗಳಿಗೆ ಮುಕ್ತವಾಗಿ ಒಳಗೊಳ್ಳುತ್ತಿಲ್ಲ. ಭಿನ್ನಾಭಿಪ್ರಾಯ ಇದ್ದಾಗಲೂ ಪರಸ್ಪರ ಗೌರವವನ್ನಿಟ್ಟುಕೊಂಡು ಸಂವಾದ ನಡೆಸಬೇಕೆಂಬ ಪರಿಕಲ್ಪನೆ ಬರುತ್ತಿಲ್ಲ ಅಂತ ವಿಷಾಧ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಿವರಾಜ್ ಮೋತಿ, ಹೋರಾಟಗಾರ ಮಂಜುನಾಥ್ ಚಲುವಾದಿ, ಯುವಕವಿ ಹನುಮಂತ ದಾಸರ್, ವಕೀಲ ರಾಜಪ್ಪ, ಸಂಶೋಧನಾರ್ಥಿ ನಾರಾಯಣ ನಾಗೋಲಿ ಇದ್ದರು.

Exit mobile version