Site icon NBTV Kannada

ಚಿಕ್ಕಮರಳಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಒತ್ತುವರಿ ತೆರವು ಅಗತ್ಯ: ಬಲರಾಮೇಗೌಡ

ಪಾಂಡವಪುರ(ಆ.24): ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆದಿಲ್ಲ, ₹28 ಲಕ್ಷದ ಕಾಮಗಾರಿಗೆ ₹1.20 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಗುತ್ತಿಗೆದಾರ ಕನಗನಮರಡಿ ಬಲರಾಮೇಗೌಡ ಹಾಗೂ ಗ್ರಾಮದ ಯಜಮಾನರು ಸ್ಪಷ್ಟಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಲರಾಮೇಗೌಡ, ಕಾಮಗಾರಿಗೆ ಆರಂಭದಲ್ಲಿ ₹28 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಗ್ರಾಮದ ಪ್ರಮುಖ ರಸ್ತೆಯಾಗಿರುವುದರಿಂದ ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಲಾಗಿತ್ತು. ಶಾಸಕರ ಭರವಸೆಯ ಮೇರೆಗೆ ಕಾಮಗಾರಿ ಮುಂದುವರಿಸಲಾಗಿದ್ದು, ಇದುವರೆಗೆ ₹82 ಲಕ್ಷ ವೆಚ್ಚದಲ್ಲಿ 470 ಮೀಟರ್ ಸಿಸಿ ರಸ್ತೆ, 440 ಮೀಟರ್ ಚರಂಡಿ, 140 ಮೀಟರ್ ಸ್ಲ್ಯಾಬ್ ಹಾಗೂ 35 ಮೀಟರ್ ಡೆಕ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಉಳಿದ ಕಾಮಗಾರಿ ಪೂರ್ಣಗೊಳಿಸಲು ಸುಮಾರು ₹36–38 ಲಕ್ಷ ಅಗತ್ಯವಿದ್ದು, ರಸ್ತೆಯ ಜಾಗದಲ್ಲಿರುವ ಒತ್ತುವರಿ ತೆರವುಗೊಳಿಸಿದ ಬಳಿಕ ಕೆಲಸ ಮುಂದುವರಿಸಲಾಗುವುದು. ಈ ಕುರಿತು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ ಎಂದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಗ್ರಾಮದ ಅಭಿವೃದ್ಧಿಗೆ ಸ್ಪಂದಿಸಿ, ಹೆಚ್ಚುವರಿ ಅನುದಾನ ಕೊಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಗೆ ಅಡ್ಡಿಪಡಿಸಿ ನಂತರ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಗ್ರಾಮದ ಯಜಮಾನ ಸ್ವಾಮಿಗೌಡ ಹಾಗೂ ಮಾಜಿ ಪಂಚಾಯಿತಿ ಅಧ್ಯಕ್ಷ ತಮ್ಮಣ್ಣ ಮಾತನಾಡಿ, ಕಾಮಗಾರಿಗೆ ಗ್ರಾಮಸ್ಥರು ಸಹಕರಿಸಬೇಕು. ರಸ್ತೆ ಒತ್ತುವರಿ ತೆರವುಗೊಳಿಸಿ ಕಾಮಗಾರಿ ಪೂರ್ಣಗೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಿ. ಸ್ವಾಮಿಗೌಡ, ಭೀಮಯ್ಯ, ಈರಾಚಾರಿ, ಸಿ. ಪ್ರಕಾಶ್, ಸಿ.ಕೆ. ನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Exit mobile version