ಬೆಂಗಳೂರು ಫೆ.16: ಸ್ವಾತಂತ್ರ್ಯ ಮತ್ತು ಆತಂಕದಲ್ಲಿ ನೇರವಾಗಿ ಅಂಬೇಡ್ಕರ್ ಅವರನ್ನು ಎದುರಿಸಲಿಕ್ಕೆ ಆಗದವರು ಪರ್ಯಾಯ ಮಾರ್ಗ ಹಿಡಿದು ಹೋಗುತ್ತಿದ್ದಾರೆ. ಎಪ್ಪತ್ತರ ದಶಕದಿಂದ ಚಳುವಳಿ ಜೊತೆಯಲ್ಲಿ ಇದ್ದೇನೆ. ಪರ್ಯಾಯ ಸಂವಿಧಾನವನ್ನು ಬಿವಿಎಸ್ ಮತ್ತು ಚಳುವಳಿಗಳು ಎದುರಿಸಲಿಕ್ಕೆ ಸರ್ವಸಿದ್ಧ, ಸನ್ನದ್ದು ಆಗಿವೆ ಎಂದು ಪ್ರೊ. ಅರವಿಂದ ಮಾಲಗತ್ತಿ ಎಚ್ಚರಿಕೆ ನೀಡಿದರು.
ಭಾರತೀಯ ವಿದ್ಯಾರ್ಥಿ ಸಂಘ(ಬಿವಿಎಸ್) ರಜತ ಮಹೋತ್ಸವ-2025 ಅಂಗವಾಗಿ ಸುಮನಹಳ್ಳಿಯ ಡಾ. ಬಾಬು ಜಗಜೀವನರಾಮ್ ಭವನದಲ್ಲಿ ನಡೆದ ವಿದ್ಯಾರ್ಥಿಗಳ ಉನ್ನತ ಶಿಕ್ಷಣ, ಉದ್ಯೋಗ, ಉದ್ಯಮ ಹಾಗೂ ಜಾಗತಿಕ ಬೆಳವಣಿಗೆಗಾಗಿ ಸಂಕಲ್ಪ ಸಮಾವೇಶದಲ್ಲಿ ಮಾಲಗತ್ತಿ ಮಾತನಾಡುತ್ತಾ; “ದಲಿತ ಸಂಘಟನೆಗಳೆಂದರೆ ಮುಕ್ತ ವಿಶ್ವವಿದ್ಯಾದ್ಯಾಲಯ” ಮೂವತ್ತೇಳು ವಿಶ್ವವಿದ್ಯಾಲಯಗಳು ಇವೆ. ಅಲ್ಲಿ ಕಲಿಸದ ಪಾಠಗಳನ್ನು ನಮ್ಮ ಚಳುವಳಿಗಳು ಕಲಿಸಿವೆ. ಅಂಬೇಡ್ಕರ್ ರಥ ಮತ್ತು ಪಥ ಒಟ್ಟೊಟ್ಟಿಗೆ ಸಾಗಿವೆ. ಸಾಗಬೇಕಾದ ದಾರಿಯಲ್ಲಿ ಇನ್ನೂ ಸಾಗಬೇಕಿದೆ. ಚಳುವಳಿಯ ದಿಕ್ಕನ್ನು ಬಿವಿಎಸ್ ಬದಲಿಸಿತು. ಅದೊಂದು ಅಚ್ಚರಿಯ ತಿರುವು. 2000 ಇಸವಿಯ ಬೌದ್ಧಿಕ ನಂತರದ ಹಾದಿಯಾಗಿ ಭೌತಿಕ ಹೋರಾಟ ಎನ್ನಬಹುದು. 2000ನೇ ಇಸವಿಯಿಂದ ಹಿಂದಿನದು ಭೌತಿಕ ಹೋರಾಟ(ಅಂದರೆ ಡಿಎಸ್ಎಸ್ ಮಾಡಿದ ಧರಣಿ, ಸತ್ಯಾಗ್ರಹ, ಪ್ರತಿಭಟನೆಗಳು ಇತ್ಯಾದಿ) 2000ನೇ ಇಸವಿಯ ನಂತರದ್ದು ಬೌದ್ಧಿಕ ಹೋರಾಟ(ಅಂದರೆ ಬಿವಿಎಸ್ ಮಾಡಿದ ವಿಚಾರ ಸಂಕಿರಣಗಳು, ಚರ್ಚಾಗೋಷ್ಠಿಗಳು, ಪುಸ್ತಕ/ಧ್ವನಿಸುರುಳಿ ಬಿಡುಗಡೆ ಇತ್ಯಾದಿ) ಬೌದ್ಧಿಕ ಆಲೋಚನಾ ಕ್ರಮದಲ್ಲಿ ಕಾರ್ಲ್ಮಾರ್ಕ್ಸ್, ಗಾಂಧಿ, ಲೋಹಿಯಾ, ಅಂಬೇಡ್ಕರ್ ವಿಚಾರಗಳು 2000 ಇಸವಿಯವರೆಗೆ ನಮ್ಮಲ್ಲಿ ಒಟ್ಟೊಟ್ಟಿಗೆ ಇದ್ದವು. ಬಿವಿಎಸ್ ಬಂದಾಗ ಆಲೋಚನಾ ಕ್ರಮಗಳು ಬದಲಾದವು. ಆಲೋಚನಾ ಕ್ರಮದ ಬದಲಾವಣೆಯೇ ಚಳುವಳಿಯ ದಿಕ್ಕಿನ ಬದಲಾವಣೆ ಎಂದರು.
ಹಾಗೆಯೇ ಶಿಕ್ಷಣ, ಸಂಘಟನೆ, ಹೋರಾಟದ ಅನುವಾದ ಮಾಡುವಲ್ಲಿ ಸಣ್ಣದಾದ ದೊಡ್ಡ ತಪ್ಪು ಮಾಡಿದ್ದೀರಿ. ಮೊದಲಿಗೆ ದಲಿತೇತರ ಬಗ್ಗೆ ಟೀಕೆ ನಮ್ಮಲ್ಲಿತ್ತು. ಬಿವಿಎಸ್ ಎಂಥಾ ಬಲವಾದ ಚಿಕಿತ್ಸೆ ಕೊಟ್ಟಿದ್ದೆ ಅಂದರೆ ದಲಿತ ನಾಯಕರನ್ನು ಪ್ರಶ್ನಿಸುವ, ವಿಮರ್ಶಿಸುವಂತೆ ಮಾಡಿತು. ಗುರುವನ್ನು ಯಾರು ಪ್ರಶ್ನಿಸುತ್ತಾರೋ, ವಿಮರ್ಶಿಸುತ್ತಾರೋ ಅವರು ಗುರುಗಳು ಆಗುವುದಕ್ಕೆ ನಿಜವಾದ ಅರ್ಹರು. ಇಲ್ಲದಿದ್ದರೆ ಇನ್ನೂ ವಿದ್ಯಾರ್ಥಿ ಆಗಿದ್ದಾರೆ ಎಂದೇ ಅರ್ಥ ಎಂದು ನೆರೆದ ಬಿವಿಎಸ್ ವಿದ್ಯಾರ್ಥಿಗಳಿಗೆ ಗುರುಗಳು ಆಗಿ ಎಂದು ಒತ್ತಿ ಹೇಳಿದರು.
ಚಳುವಳಿ ನಿರಂತರವಾದದ್ದು, ನಡೆಯುವಂತಹದ್ದು. “ವಸ್ತುನಿಷ್ಠವಾದ ಟೀಕೆ ಇದ್ದರೆ ಮಾತ್ರ ಟೀಕೆ, ಇಲ್ಲದಿದ್ದರೆ ಅದು ಜಗಳ” ಒಡೆಯುವ, ಕಟ್ಟುವ ಕೆಲಸವೂ ಬಿವಿಎಸ್ ಮಾಡಿದೆ. 2000 ರಲ್ಲಿ ಬಂದ ಬಿವಿಎಸ್ ಒಂದು ವಿಚಾರವನ್ನು ಹಾಡು ಆಗಿಸೋದು ಹೇಗೆ ಎಂದು ತೋರಿಸಿದೆ. ಕೀರ್ತನೆಗಳ ಮೂಲಕ ಅಂಬೇಡ್ಕರ್ ವ್ಯಕ್ತಿತ್ವವನ್ನು ಪರಿಚಯಿಸುವ ಪ್ರಕ್ರಿಯೆಗೆ ದಿಗ್ಭ್ರಮೆ ಆಗಿದೆ ಎಂದು ಸಂತೋಷ ವ್ಯಕ್ತಪಡಿಸುತ್ತಾ, ಮಹಾರಾಷ್ಟ್ರ ಸರ್ಕಾರ ಬಾಬಾಸಾಹೇಬರ ಸಂಪುಟಗಳನ್ನು ಹೊರತಂದಾಗ ಭಾರತಕ್ಕೆ ಬೆಳಗಾಯಿತು. ಅಂಬೇಡ್ಕರ್ ವಿಚಾರದಲ್ಲಿ ಮೀಯಬೇಕು, ಮೀಯಿಸಬೇಕಿದೆ. ವಿದ್ಯುತ್ ಸಂಚಾರದ ಹಾಗೆಯೇ ಬಿವಿಎಸ್ ರಾಜ್ಯಾದ್ಯಂತ ಹರಡಬೇಕಿತ್ತು. ಬಾಬಾ ಸಾಹೇಬರ ಇಪ್ಪತ್ತೆರಡು ಸಂಪುಟಗಳು ಕೂರಿಗೆ ಗದ್ದಿಗೆ ಅಲ್ಲಿ ಏನನ್ನು ಬಿತ್ತುತ್ತಿರೋ ಅದನ್ನು ಆಗುತ್ತೀರಿ. ನೀವು ಬೇಡುವ ಕೈ ಅಲ್ಲ, ಕೊಡುವ ಶಕ್ತಿಯಾಗಬೇಕು ಎಂಬ ಕಾನ್ಷಿರಾಮ್ ಮಾತು ನನ್ನ ಎದೆಗೆ ತಟ್ಟಿತ್ತು ಎಂದು ಆದರ್ಶವಾಗಿ ಮಾಲಗತ್ತಿ ಹೇಳಿದರು.
ಚಳುವಳಿ ಅಂದರೆ ಹರಿಯುವ ನೀರು ಇದ್ದಂತೆ. ಪರಸ್ಪರ ಸಂಘಟನೆಗಳ ಜೊತೆಗೆ ಸಹೋದರತೆ ಇರದಿದ್ದರೆ ನಮ್ಮ ಚಳುವಳಿಗೆ ಅರ್ಥವಿಲ್ಲ. ಒಡೆಯುವ, ಕೂಡುವಿಕೆಯ ಗುಣ ಸಹಜವಾದದ್ದು. ಅಂಬೇಡ್ಕರ್ ಅಂದರೆ ದೇಶವನ್ನು ಪ್ರೀತಿಸುವ ವಾದ, ದೇಶವನ್ನು ಕಟ್ಟುವ ವಾದ. “ದಲಿತರಿಂದ ದೇಶಕ್ಕೆ ರಕ್ಷಣೆ ಇದೆ: ಶೋಷಿತ ಸಮುದಾಯಗಳಿಗೆ ಆ ಶಕ್ತಿ ಇದೆ” ಎಂದು ನಾನು ಎಲ್ಲಿ ಬೇಕಾದರೂ ನಿಂತು ಹೇಳಬಲ್ಲೆ ಹಾಗೂ ರಾಜಕೀಯದ ಜೊತೆಗೆ ವಿದ್ಯಾರ್ಥಿ, ಸಾಮಾಜಿಕ ಸಂಘಟನೆಗಳು ಇರಬೇಕು ಮತ್ತು ಅಂತರ ಕಾಪಾಡಿಕೊಳ್ಳಬೇಕಾದ ಪ್ರಜ್ಞೆಯೂ ನಮ್ಮಲ್ಲಿ ಇರಬೇಕೆಂದು ತಮ್ಮ ಮಾತುಗಳನ್ನು ಬಿವಿಎಸ್ ಇಪ್ಪತ್ತೈದು ವರ್ಷಗಳ ಮೆಲುಕು ಹಾಕುತ್ತಾ ವಿಚಾರಗಳನ್ನು ಹಂಚಿಕೊಂಡರು.
ವರದಿ : ಶಿವರಾಜ್ ಮೋತಿ

